ಬೆಳಗಾವಿ/ಬೆಂಗಳೂರು :ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಚುನಾವಣಾ ಜಾಹೀರಾತು ನೀಡುವಲ್ಲಿ ಕರ್ನಾಟಕ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಇದೀಗ ಬಲವಾಗಿ ಕೇಳಿ ಬಂದಿದೆ.
ಸ್ವತಃ ವಾರ್ತಾ ಮಂತ್ರಿಗಳು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ‘ಸರ್ವರಿಗೂ ಸಮಬಾಳು ಸಮಪಾಲು ನೀತಿ’ ಮರೆಯದಿರಿ.
ಮುಖ್ಯಮಂತ್ರಿಗಳೇ, ನಿಮ್ಮ ಬಳಿಯೇ ಇರುವ ವಾರ್ತಾ ಇಲಾಖೆ ಸಣ್ಣ ಪತ್ರಿಕೆಗಳನ್ನು ಮೊದಲು ಸಂತೈಸಬೇಕಿದೆ. ಕೂಡಲೇ ಸರಕಾರಿ ಚುನಾವಣಾ ಜಾಹೀರಾತುಗಳು ಎಲ್ಲರಿಗೂ ನೀಡುವಂತೆ ಫರ್ಮಾನು ಹೊರಡಿಸಿ ಅನ್ಯಾಯ ಸರಿಪಡಿಸಲು ಧಾವಿಸಿ.
ಕೇಂದ್ರದಲ್ಲಿ, ರಾಜ್ಯದಲ್ಲಿ ಯಾವುದೇ ಸರಕಾರ ಆಡಳಿತಕ್ಕೆ ಬಂದ ಮೇಲೆ ಡಿಸೆಂಬರ್ ನಿಂದ ಮಾರ್ಚ್ ವರೆಗೆ ಚುನಾವಣಾ ಸಮಯದಲ್ಲಿ ಜಾಹೀರಾತು ನೀಡುವ ಪರಂಪರೆಯನ್ನು ಚಾಚು ತಪ್ಪದೆ ಪಾಲಿಸಿಕೊಂಡು ಬರಲಾಗಿದೆ. ಆದರೆ, ಈಗ ರಾಜ್ಯಮಟ್ಟದ ಪತ್ರಿಕೆಗಳಿಗೆ ಮಾತ್ರ ಸೀಮಿತವಾಗಿ ಜಾಹೀರಾತು ನೀಡಿ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ವಂಚಿಸುತ್ತಿರುವುದು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ.
ಮುಖ್ಯಮಂತ್ರಿಗಳೇ ಇದೀಗ ಸ್ವತಃ ವಾರ್ತಾ ಇಲಾಖೆಯ ಮಂತ್ರಿ ಆಗಿರುವುದು ಈ ಬಗ್ಗೆ ಅವರು ಗಮನ ನೀಡಬೇಕಾಗಿದೆ. ಈ ಇಲಾಖೆಗೆ ಕೂಡಲೇ ಚುನಾವಣಾ ಜಾಹೀರಾತುಗಳನ್ನು ಸರ್ಕಾರದ ವತಿಯಿಂದ ನೀಡಬೇಕು ಎಂದು ಸಣ್ಣ ಹಾಗೂ ಪ್ರಾದೇಶಿಕ ಪತ್ರಿಕೆಗಳ ಸಂಪಾದಕರು ಆಗ್ರಹಿಸಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಸರ್ಕಾರಗಳು ಆಡಳಿತದಲ್ಲಿದ್ದಾಗ ಎಲ್ಲಾ ಪತ್ರಿಕೆಗಳಿಗೆ ಸರಿಸಮ ಜಾಹೀರಾತು ನೀಡಿರುವ ಇತಿಹಾಸ ಇದೆ. ಆದರೆ, ಸದ್ಯದ ಸಂದರ್ಭದಲ್ಲಿ ಜಾಹೀರಾತು ನೀಡುತ್ತಿಲ್ಲ. ಇದು ಯಾಕೆ ಎನ್ನುವುದು ಎಲ್ಲರ ಪ್ರಶ್ನೆ.
ರಾಜ್ಯಮಟ್ಟದ ಪತ್ರಿಕೆಗಳು ಎಂದು ಹೇಳಿಕೊಂಡು ಬರುವ ದೊಡ್ಡ ಪತ್ರಿಕೆಗಳಿಗಿಂತ ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳು ಹೆಚ್ಚು ಸುದ್ದಿಯನ್ನು ಪ್ರಕಟಿಸುತ್ತೇವೆ. ಇದನ್ನು ಮುಖ್ಯಮಂತ್ರಿಗಳು ಸೂಕ್ಷ್ಮವಾಗಿ ಗಮನಿಸಬೇಕು. ಒಟ್ಟಾರೆ ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಆಗುತ್ತಿರುವ ಅನ್ಯಾಯವನ್ನು ಗಮನಿಸಿ ಮುಖ್ಯಮಂತ್ರಿಗಳು ನ್ಯಾಯ ನೀಡಬೇಕು ಎನ್ನುವುದು ಈ ಪತ್ರಿಕೆಗಳ ಸಂಪಾದಕರ ಒಕ್ಕೊರಲ ಆಗ್ರಹವಾಗಿದೆ.
ಹಲವು ಪತ್ರಿಕೆಗಳ ಸಂಪಾದಕರು ಈಗಾಗಲೆ ಸಿಎಂ ಅವರಿಗೆ ಮನವಿ ಮಾಡಿದರೂ ಅದನ್ನು ಗಂಭೀರವಾಗಿ ಪರಿಗಣಿಸದಿರುವುದು ತೀವ್ರ ಆಕ್ರೋಶಕ್ಕೆ ಎಡೆ ಮಾಡಿದೆ.
ಸುತ್ತೋಲೆಗೆ ಬೆಲೆ ಎಲ್ಲಿ?:ಸನ್ಮಾನ್ಯ ಮುಖ್ಯಮಂತ್ರಿಗಳು ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ/ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀಡುವುದಾಗಿ ಸ್ವತಃ ವಾರ್ತಾ ಇಲಾಖೆಯ ಆಯುಕ್ತರೇ ಸುತ್ತೋಲೆ ಹೊರಡಿಸಿ ತಿಂಗಳು ಕಳೆಯಿತು.
ಸೋಜಿಗವೆಂದರೆ ಬೆಳಗಾವಿಯಲ್ಲಿ 10 ದಿನಗಳ ಕಾಲ ನಡೆದ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಹಲವಾರು ಅಬಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಶಂಕು ಸ್ಥಾಪನೆ/ ಉದ್ಘಾಟನೆ ನೆರವೇರಿಸಿದರು. ಆದರೆ ಒಂದೇ ಒಂದು ಜಾಹೀರಾತು ಕೂಡ ವಾರ್ತಾ ಇಲಾಖೆಯಿಂದ ನೀಡಲಾಗಿಲ್ಲ. ರಾಜ್ಯದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿಗೆ ಪ್ರಧಾನಮಂತ್ರಿ ಆಗಮಿಸಿದಾಗಲೂ ಒಂದೂ ಜಾಹೀರಾತು ನೀಡದೇ ಖಂಡಿತವಾಗಲೂ ಉದ್ದೇಶಪೂರ್ವಕವಾಗಿ ಸ್ಥಳೀಯ ಪತ್ರಿಕೆಗಳನ್ನು ಕಡೆಗಣಿಸುವ ಹುನ್ನಾರ ಅಲ್ಲದೆ ಬೇರೇನೂ ಅಲ್ಲ.
ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಬಗ್ಗೆ ಇಲಾಖೆ ಇಬ್ಬಗೆ ನೀತಿ ಅನುಸರಿಸುತ್ತಿದ್ದು, ಈ ಪತ್ರಿಕೆಗಳ ಬಗ್ಗೆ ಸ್ವತಃ ಮುಖ್ಯಮಂತ್ರಿಗಳಿಗೆ ತಪ್ಪು ಅಭಿಪ್ರಾಯ ಮೂಡಿಸಿ ಜಾಹೀರಾತು ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
‘ಬಿಜೆಪಿ’ ಬೆಳೆಸಿದ್ದೇ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳು: ಅನೇಕ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳು ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಬೇರೂರುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿರುವುದು ಉಲ್ಲೇಖನೀಯ ಮತ್ತು ಗಮನಾರ್ಹ. ರಾಜ್ಯ ಪತ್ರಿಕೆಗಳಿಗೊಂದು ನ್ಯಾಯ; ಪ್ರಾದೇಶಿಕ ಪತ್ರಿಕೆಗಳಿಗೆ ಅನ್ಯಾಯ ನೀತಿ ಸಲ್ಲದು. ಬಿಜೆಪಿಯ ಕಾರ್ಯಗಳಿಗೆ ಪ್ರಾದೇಶಿಕ ಪತ್ರಿಕೆಗಳು ಬೆನ್ನುತಟ್ಟಿ ಸರಕಾರ ಬರಲು ಪ್ರೋತ್ಸಾಹ ನೀಡಿವೆ ಎಂಬುದನ್ನು ಮುಖ್ಯಮಂತ್ರಿ ಅರಿಯಬೇಕಿದೆ.
ಒಂದೇ ತಾಯಿಯ ಮಕ್ಕಳನ್ನು ಮೇಲು ಕೀಳು ಮಾಡದೇ ಒಂದೇ ನ್ಯಾಯವನ್ನು ಮುಖ್ಯಮಂತ್ರಿ ಕೂಡಲೇ ಅನುಸರಿಸಬೇಕಿದೆ.