ಬೆಳಗಾವಿ:ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪಿತನಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ಪೋಕ್ಸೊ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಬೈಲಹೊಂಗಲದ ನಂದೆಮ್ಮ ನಗರದ ಪ್ರದೀಪ ನಂದೇಶ @ನಂದು ಬಂಡಿವಡ್ಡರ (23) ಆರೋಪಿ.
ಫಿರ್ಯಾದಿದಾರಳ ಮಗಳು ನೊಂದ ಬಾಲಕಿ ಅಪ್ರಾಪ್ತ ವಯಸ್ಸಿನವಳು ಎಂದು ಗೊತ್ತಿದರೂ ಆರೋಪಿ 30-12-2024 ರಂದು ಅವಳು ದಿನಾಲೂ ಶಾಲೆಗೆ ಹೋಗುವಾಗ ಬರುವಾಗ ಅಡಗಟ್ಟಿ ಕಣ್ಣು ಹೊಡೆಯವುದು ಕೈ ಸೊನ್ನೆ ಮಾಡುವುದು ಮಾಡುತ್ತಾ ನೀನು ನಾನು ಹೇಳಿದ ಹಾಗೇ ಕೇಳಬೇಕು ಎನ್ನುತ್ತಾ ಕಾಡಿಸಿದ್ದಲ್ಲದೆ ನಂತರ ಫಿರ್ಯಾದಿಯರ ಮನೆಯ ಜನರಿಗೆ ಏ ಬೋ* ಮಕ್ಕಳಿರಾ ನೀವೇನ್ನ ಮಾಡತೇರಿ ಮಾಡಿಕೊಳ್ಳಿರಿ ಅಂತಾ ಒದರಾಡಿ ನಿಮ್ಮ ಮಗಳಿಗೆ ನಾವು ಬಿಡುವುದಿಲ್ಲ ಅಂತಾ ಹೇಳಿದ ಅಪರಾಧಕ್ಕೆ ದಾಖಲಾಧಿಕಾರಿ ಎಸ್.ಕೆ. ಇಂಗಳಗಾಂವ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮಕ್ಕಾಗಿ ತನಿಖಾಧಿಕಾರಿ ಪಿಎಸ್ ಐ ಎಫ್.ವೈ. ಮಲ್ಲೂರ, ಗುರುರಾಜ ಕಲಬುರ್ಗಿ ಪ್ರಕರಣದ ಮುಂದಿನ ತನಿಖೆ ಮಾಡಿ ಪ್ರಕರಣವನ್ನು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದು, ಮಾನ್ಯ ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಅವರು ಪ್ರಕರಣವನ್ನು ವಿಚಾಮಾಡಿ, ಒಟ್ಟು 10 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ 13 ದಾಖಲೆಗಳ ಆಧಾರದ ಮೇಲೆ ಆರೋಪಿ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿತನಿಗೆ 3 ವರ್ಷಗಳ ಕಾರಾಗೃಹ ಶಿಕ್ಷೆ ದಂಡ ರೂ 10,000/- ಮಾನ್ಯ ನ್ಯಾಯಾಲಯವು ತೀರ್ಪು ನೀಡಿದ್ದು ಮತ್ತು ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂಪಾಯಿ 1 ಲಕ್ಷಗಳ ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿರುತ್ತದೆ. ಪರಿಹಾರ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 05 ವರ್ಷಗಳವರೆಗೆ ಮುದ್ದತ್ತ ಠೇವಣಿಯಾಗಿ ಇಡಲು ಮಾನ್ಯ ನ್ಯಾಯಾಲಯ ಆದೇಶ ಮಾಡಿದೆ. ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಹಾಜರಾಗಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.


