ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕಾಲ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಬುಧವಾರ ಭಾರಿ ಕುಸಿತ ಕಂಡಿವೆ.
ತೈಲ ಪೂರೈಕೆ ವ್ಯತ್ಯಯದ ಭೀತಿ ದೂರಾದ ಬೆನ್ನಲ್ಲೇ ಬುಧವಾರ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿದ್ದು, ಪ್ರತಿ ಬ್ಯಾರೆಲ್ಗೆ 100 ಡಾಲರ್ ಮಟ್ಟಕ್ಕಿಂತ ಕೆಳಕ್ಕೆ ಇಳಿದಿವೆ.
ಕೇವಲ ಒಂದೇ ದಿನದ ವಹಿವಾಟಿನಲ್ಲಿ ತೈಲ ಬೆಲೆಗಳು ಶೇ. 13 ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ ಸುಮಾರು $94–$95ಕ್ಕೆ ಇಳಿಕೆಯಾಗಿದೆ. WTI ಕಚ್ಚಾ ತೈಲ (US) ಬೆಲೆ ಪ್ರತಿ ಬ್ಯಾರೆಲ್ಗೆ ಅಂದಾಜು $96 ಕ್ಕೆ ಕುಸಿದಿದೆ.
ಈ ಕದನ ವಿರಾಮ ಒಪ್ಪಂದದ ಪ್ರಮುಖ ಷರತ್ತೆಂದರೆ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಪುನಃ ತೆರೆಯುವುದು. ಇದಕ್ಕೆ ಇರಾನ್ ಒಪ್ಪಿದ ನಂತರ ಎರಡು ವಾರಗಳ ಕದನ ವಿರಾಮಕ್ಕೆ ಬರಲಾಗಿದೆ.
ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು ಶೇ. 20 ರಷ್ಟು ಭಾಗ ಹಾರ್ಮುಜ್ ಜಲಸಂಧಿ ಮಾರ್ಗದ ಮೂಲಕವೇ ಸಾಗುವುದರಿಂದ, ತೈಲ ಪೂರೈಕೆ ವ್ಯವಸ್ಥೆ ಸುಗಮವಾಗಲಿದೆ ಎಂಬ ನಿರೀಕ್ಷೆ ಮೂಡಿದೆ. ಇದರಿಂದಾಗಿ ಕಚ್ಚಾ ತೈಲ ಬೆಲೆಗಳಲ್ಲಿ ಭಾರಿ ಇಳಿಕೆಯಾಗಿದೆ.
ಗಮನಾರ್ಹ ಸಂಗತಿಯೆಂದರೆ, ಕೇವಲ ಒಂದು ದಿನದ ಹಿಂದೆಯಷ್ಟೇ ಯುದ್ಧದ ಭೀತಿ ಮತ್ತು ಪೂರೈಕೆ ಅಡಚಣೆಯಿಂದಾಗಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ $110 ದಾಟಿತ್ತು. ತೈಲ ಮೂಲಸೌಕರ್ಯಗಳ ಮೇಲೆ ದಾಳಿ ನಡೆಯಬಹುದು ಎಂಬ ಭಯದಿಂದ ಬೆಲೆಗಳು ಕಳೆದ ಹಲವು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದ್ದವು.
ಯುದ್ಧದ ಆತಂಕದ ಸಮಯದಲ್ಲಿ ಬೆಲೆಯಲ್ಲಿ ಸೇರಿಕೊಂಡಿದ್ದ ‘ರಿಸ್ಕ್ ಪ್ರೀಮಿಯಂ’ (Risk Premium) ಈಗ ಕದನ ವಿರಾಮ ಏರ್ಪಡುತ್ತಿದ್ದಂತೆ ಮಾಯವಾಗಿದೆ. ಸದ್ಯಕ್ಕೆ ಹಡಗು ಸಂಚಾರ ಮತ್ತು ಪೂರೈಕೆಯಲ್ಲಿ ಯಾವುದೇ ತೊಂದರೆಗಳು ಎದುರಾಗುವ ಸಾಧ್ಯತೆ ಕಡಿಮೆ ಇರುವುದರಿಂದ ಬೆಲೆಗಳು ಸಹಜ ಸ್ಥಿತಿಗೆ ಮರಳುತ್ತಿವೆ.
ತೈಲ ಬೆಲೆಗಳು ಕುಸಿದಿದ್ದರೂ ಸಹ, ಅವು ಯುದ್ಧ ಪೂರ್ವದ ಮಟ್ಟಕ್ಕಿಂತ ಇಂದಿಗೂ ಹೆಚ್ಚಾಗಿವೆ. ಪ್ರಸ್ತುತ ಘೋಷಣೆಯಾಗಿರುವ ಕದನ ವಿರಾಮವು ತಾತ್ಕಾಲಿಕ ಮತ್ತು ಷರತ್ತುಬದ್ಧವಾಗಿದೆ. ಒಂದು ವೇಳೆ ಸಂಧಾನ ಮುರಿದುಬಿದ್ದರೆ ಅಥವಾ ಮತ್ತೆ ಉದ್ವಿಗ್ನತೆ ಹೆಚ್ಚಾದರೆ ಬೆಲೆಗಳು ಮತ್ತೆ ಏರಬಹುದು.
ಭಾರತಕ್ಕೆ ನಿರಾಳತೆ
ಜಾಗತಿಕವಾಗಿ ಭೌಗೋಳಿಕ ರಾಜಕೀಯ ಸಂಘರ್ಷಗಳು ತಣ್ಣಗಾಗಿರುವುದು ಭಾರತದಂತಹ ತೈಲ ಆಮದಿನ ಮೇಲೆ ಅವಲಂಬಿತವಾಗಿರುವ ದೇಶಗಳಿಗೆ ದೊಡ್ಡ ಮಟ್ಟದ ಸಮಾಧಾನ ತಂದಿದೆ. ಇದು ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆಯಿದೆ.
ಒಟ್ಟಾರೆಯಾಗಿ, ಪಶ್ಚಿಮ ಏಷ್ಯಾದಲ್ಲಿನ ರಾಜತಾಂತ್ರಿಕ ಬೆಳವಣಿಗೆಗಳು ಜಾಗತಿಕ ಇಂಧನ ಮಾರುಕಟ್ಟೆಗೆ ಸದ್ಯಕ್ಕೆ ನಿರಾಳತೆ ತಂದಿವೆ. ಅಗ್ರೆಸ್ಸಿವ್ ಸೆಲ್ಲಿಂಗ್ (ಭಾರಿ ಮಾರಾಟ) ಪ್ರಕ್ರಿಯೆಯಿಂದಾಗಿ ಬೆಲೆಗಳು ಹಠಾತ್ ಕುಸಿತ ಕಂಡಿವೆ.


