ವಾಷಿಂಗ್ಟನ್/ತೆಹ್ರಾನ್ : ಇಡೀ ನಾಗರಿಕತೆಯೇ ನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಸಮ್ಮತಿಸಿದ್ದಾರೆ. ಈ ಮೂಲಕ ಇರಾನ್ನ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳ ಮೇಲಿನ ದಾಳಿಯನ್ನು ಅಮೆರಿಕ ಸದ್ಯಕ್ಕೆ ಸ್ಥಗಿತಗೊಳಿಸಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ನೀಡಿದ ಪ್ರಸ್ತಾವನೆಯನ್ನು ಟ್ರಂಪ್ ಒಪ್ಪಿಕೊಂಡಿದ್ದಾರೆ. ಈ ಪ್ರಸ್ತಾವನೆಯು 15 ದಿನಗಳ ಕಾಲ ಯುದ್ಧ ನಿಲುಗಡೆ ಮತ್ತು ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ತಕ್ಷಣವೇ ತೆರೆಯಲು ಸೂಚಿಸುತ್ತದೆ.
ಇರಾನ್ನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಈ ಕದನ ವಿರಾಮವನ್ನು ಸ್ವಾಗತಿಸಿದ್ದಾರೆ. “ಅಮೆರಿಕ ದಾಳಿಯನ್ನು ನಿಲ್ಲಿಸಿದರೆ, ನಮ್ಮ ಸಶಸ್ತ್ರ ಪಡೆಗಳು ಕೂಡ ರಕ್ಷಣಾತ್ಮಕ ಕಾರ್ಯಾಚರಣೆ ಸ್ಥಗಿತಗೊಳಿಸಲಿವೆ” ಎಂದು ಅವರು ತಿಳಿಸಿದ್ದಾರೆ.
ಇರಾನ್ನ ನೂತನ ಸುಪ್ರೀಂ ಲೀಡರ್ ಆಯತೊಲ್ಲಾ ಮೊಜ್ತಾಬಾ ಖಮೇನಿ ಅವರು ಈ ಒಪ್ಪಂದಕ್ಕೆ ಅಸ್ತು ಎಂದಿದ್ದಾರೆ. ಈ ನಿರ್ಧಾರದ ಹಿಂದೆ ಇರಾನ್ನ ಮಿತ್ರ ರಾಷ್ಟ್ರವಾದ ಚೀನಾದ ಒತ್ತಡ ಪ್ರಮುಖ ಪಾತ್ರ ವಹಿಸಿದೆ ಎಂದು ವರದಿಗಳು ತಿಳಿಸಿವೆ.
ಹಾರ್ಮುಜ್ ಜಲಸಂಧಿಯ ಮೂಲಕ ಸಂಪೂರ್ಣ ಮತ್ತು ಸುರಕ್ಷಿತ ಸಂಚಾರಕ್ಕೆ ಇರಾನ್ ಅವಕಾಶ ನೀಡಬೇಕು ಎಂಬ ಷರತ್ತಿನ ಮೇಲೆ ಈ ಕದನ ವಿರಾಮ ಜಾರಿಗೆ ಬಂದಿದೆ.
ಫೆಬ್ರವರಿ 28 ರಂದು ಆರಂಭವಾದ ಈ ಯುದ್ಧದಲ್ಲಿ ಇದುವರೆಗೆ ಭಾರಿ ಸಾವುನೋವು ಸಂಭವಿಸಿದೆ. ಇರಾನಿನಲ್ಲಿ 1,900ಕ್ಕೂ ಹೆಚ್ಚು ಜನರ ಸಾವಿಗೀಡಾಗಿದ್ದಾರೆ. ಲೆಬನಾನಿನಲ್ಲಿ 1,500ಕ್ಕೂ ಹೆಚ್ಚು ಜನರ ಸಾವಿಗೀಡಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಅಮೆರಿಕದ 13 ಸೈನಿಕರು ಮತ್ತು ಇಸ್ರೇಲ್ನ 11 ಸೈನಿಕರು ಯುದ್ಧದಲ್ಲಿ ಮೃತಪಟ್ಟಿದ್ದಾರೆ.
ಈ ಎರಡು ವಾರಗಳ ಅವಧಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಅಂತಿಮ ಒಪ್ಪಂದದ ಬಗ್ಗೆ ಚರ್ಚಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ.


