ಬೀಜಿಂಗ್: ಜೀವನದಲ್ಲಿ ಎದುರಾದ ಭೀಕರ ದುರಂತವೊಂದು ಮನುಷ್ಯನನ್ನು ಎತ್ತ ಸಾಗುವಂತೆ ಮಾಡಬಹುದು ಎಂಬುದಕ್ಕೆ ಚೀನಾದ ಈ 90 ವರ್ಷದ ವೃದ್ಧನ ಕಥೆಯೇ ಸಾಕ್ಷಿ. ತನ್ನ ಇಡೀ ಕುಟುಂಬವನ್ನು ಕಳೆದುಕೊಂಡ ನೋವಿನಿಂದ ಹೊರಬರಲು ಈ ವೃದ್ಧ ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಚೀನಾದಾದ್ಯಂತ ಸೈಕಲ್ನಲ್ಲಿ ಸಂಚರಿಸುತ್ತಾ ಸಮಾಧಾನ ಹುಡುಕುತ್ತಿದ್ದಾರೆ.
ಚೀನಾದ ಹೆನಾನ್ ಪ್ರಾಂತ್ಯದ ಕೈಫೆಂಗ್ ಮೂಲದ ಜಾಂಗ್ ಝಾಂಗ್ಯಿ ಅವರ ಜೀವನ 1990ರ ದಶಕದವರೆಗೆ ಸುಗಮವಾಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಭೀಕರ ರಸ್ತೆ ಅಪಘಾತವೊಂದರಲ್ಲಿ ಇವರ ಮಗ, ಸೊಸೆ ಮತ್ತು ಎಂಟು ವರ್ಷದ ಮೊಮ್ಮಗ ಸ್ಥಳದಲ್ಲೇ ಸಾವಿಗೀಡಾದರು. ಈ ಆಘಾತವನ್ನು ತಾಳಲಾರದ ಜಾಂಗ್ ಅವರ ಪತ್ನಿ ಕೂಡ ಮರು ವರ್ಷವೇ ಅನಾರೋಗ್ಯದಿಂದ ಕೊನೆಯುಸಿರೆಳೆದರು.
ಕಣ್ಣೆದುರೇ ಇಡೀ ಕುಟುಂಬ ಮಾಯವಾದಾಗ, ಒಂಟಿಯಾದ ಜಾಂಗ್ ಅವರಿಗೆ ಮನೆಯ ನಾಲ್ಕು ಗೋಡೆಗಳು ನರಕದಂತೆ ಭಾಸವಾಗತೊಡಗಿದವು. ಮನೆಯಲ್ಲಿದ್ದರೆ ಹಳೆಯ ನೆನಪುಗಳು ಕಾಡುತ್ತವೆ ಎಂಬ ಕಾರಣಕ್ಕೆ ಅವರು ಎಲ್ಲವನ್ನೂ ತೊರೆದು ಸೈಕಲ್ ಏರಿ ಹೊರಟರು.
ಸಾವಿರಾರು ಕಿಲೋಮೀಟರ್ಗಳ ಸುದೀರ್ಘ ಪ್ರಯಾಣ
ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿರುವಂತೆ, ಅಂದು ಆರಂಭವಾದ ಇವರ ಪಯಣ ಇಂದಿಗೂ ನಿಂತಿಲ್ಲ. ಮೊದಲು ದ್ವಿಚಕ್ರ ಸೈಕಲ್ನಲ್ಲಿ ಪ್ರಯಾಣ ಆರಂಭಿಸಿದ ಅವರು, ವಯಸ್ಸಾದಂತೆ ಸಮತೋಲನ ಕಾಪಾಡಿಕೊಳ್ಳಲು ಈಗ ಮೂರು ಚಕ್ರದ ಸೈಕಲ್ (Tricycle) ಬಳಸುತ್ತಿದ್ದಾರೆ.
ಕ್ಸಿಂಜಿಯಾಂಗ್, ಗಾನ್ಸು, ಶಾಂಘೈ, ಝೆಜಿಯಾಂಗ್ ಮತ್ತು ಫುಜಿಯಾನ್ ಸೇರಿದಂತೆ ಚೀನಾದ ಬಹುತೇಕ ಪ್ರಾಂತ್ಯಗಳನ್ನು ಇವರು ಸೈಕಲ್ನಲ್ಲೇ ಸುತ್ತಿದ್ದಾರಲ್ಲದೆ ಪರ್ವತಗಳು, ಮರುಭೂಮಿಗಳು ಮತ್ತು ನಗರಗಳನ್ನು ದಾಟಿ ಸಾವಿರಾರು ಕಿಲೋಮೀಟರ್ ಕ್ರಮಿಸಿದ್ದಾರೆ. “ನಾನು ಭೂತಕಾಲವನ್ನು ಮರೆತಿದ್ದೇನೆ. ಈಗ ನನ್ನ ಉಳಿದ ಜೀವನವನ್ನು ಪ್ರವಾಸ ಮಾಡುವುದರಲ್ಲೇ ಕಳೆಯಲು ಬಯಸುತ್ತೇನೆ ಎಂದು ಜಾಂಗ್ ಝಾಂಗ್ಯಿ ಹೇಳುತ್ತಾರೆ.


