ಬೆಳಗಾವಿ : ವಿಶ್ವ ರಂಗಭೂಮಿ ದಿನಾಚರಣೆಯನ್ನು ಮಹಾಂತೇಶ ನಗರ ರಹವಾಸಿಗಳ ಸಂಘದ ಮಹಾಂತ ಭವನದಲ್ಲಿ ಶುಕ್ರವಾರ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಣೆ ನಡೆಯಿತು.
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ರಂಗದರ್ಶನ ಗ್ರಾಮೀಣ ವಿಕಾಸ ಸಂಘ (ರಿ) ಧುಳಗನವಾಡಿ ಹಾಗೂ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಉದ್ಘಾಟಿಸಿದ ರಂಗಕರ್ಮಿ ,
ಧಾರ್ಮಿಕ ದತ್ತಿ ಇಲಾಖೆಯ
ವಿಶ್ರಾಂತ ಉಪ ಆಯುಕ್ತ ರವಿ ಕೋಟಾರಗಸ್ತಿ ಮಾತನಾಡಿ, ಯುವಕರು ರಂಗಭೂಮಿಯತ್ತ ಹೆಚ್ಚಿನ ಆಸಕ್ತಿ ತೋರಬೇಕು. ರಂಗಕಲೆ ಎಲ್ಲಾ ಕಲೆಗಳಿಗೂ ಶ್ರೇಷ್ಠ ಸ್ಥಾನ ಹೊಂದಿದ್ದು, ಅದು ವ್ಯಕ್ತಿತ್ವ ವಿಕಾಸಕ್ಕೆ ಮಹತ್ವದ ಪಾತ್ರ ವಹಿಸುತ್ತದೆ. ಸಮಾಜದ ಸುಧಾರಣೆಯಲ್ಲಿ ರಂಗಭೂಮಿಯ ಕೊಡುಗೆ ಅಪಾರ ಎಂದರು.
ಆರ್.ಪಿ.ಡಿ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್.ಬಿ. ಕೋಲಕಾರ ಅವರು ರಂಗಭೂಮಿಯ ಇತಿಹಾಸ ಹಾಗೂ ಅದರ ಬೆಳವಣಿಗೆಯನ್ನು ವಿವರಿಸಿದರು.
ಪ್ರಾಚಾರ್ಯೆ ಡಾ. ನಿರ್ಮಲಾ ಜಿ ಬಟ್ಟಲ ಅವರು ಮಾತನಾಡಿ, ರಂಗಭೂಮಿ ವಿಶ್ವಬಂಧುತ್ವದ ಸಂದೇಶ ನೀಡುವ ಶಕ್ತಿಯುತ ಮಾಧ್ಯಮ. ಸಾಂಸ್ಕೃತಿಕ ವಿನಿಮಯವು ಸಮಾಜದ ಉದ್ವಿಗ್ನತೆಗಳನ್ನು ಕಡಿಮೆ ಮಾಡುತ್ತದೆ. ಪ್ರತಿಯೊಬ್ಬ ಶಿಕ್ಷಕರೂ ನಟರಂತೆ ಕಾರ್ಯನಿರ್ವಹಿಸಬೇಕು; ತರಗತಿಯೇ ರಂಗಮಂಚ, ವಿದ್ಯಾರ್ಥಿಗಳೇ ಪ್ರೇಕ್ಷಕರು,” ಎಂದು ಹೇಳಿದರು.
ಅವರು ಶಿಕ್ಷಣದಲ್ಲಿ ನಾಟಕೀಕರಣದ ಮಹತ್ವವನ್ನು ಒತ್ತಿಹೇಳಿ, ಶಿಕ್ಷಕರು ಕಲಾಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಯ.ರು. ಪಾಟೀಲ ಅವರು, ನಾಟಕದ ಮೂಲಕ ಪಾಠವನ್ನು ಸುಲಭವಾಗಿ ಹಾಗೂ ದೀರ್ಘಕಾಲ ನೆನಪಿಡಲು ಸಾಧ್ಯ. ಯುವಕರು ರಂಗಕಲೆಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ರಂಗನಟ ಜಿ.ಕೆ. ಕಾಡೇಶಕುಮಾರ ಗೋಕಾಕ, ಶಂಕರ ಅ. ಅರಕೇರಿ ಬೆಳಗಾವಿ, ಸುಜಾತಾ ಬಿ. ಮಗದುಮ್ಮ, ಅನಿಲ ಮೇತ್ರಿ ಅವರನ್ನು ಸನ್ಮಾನಿಸಲಾಯಿತು.
ರಂಗಗೀತೆಗಳ ಗಾಯನ ಹಾಗೂ ಮಹಿಳಾ ದೌರ್ಜನ್ಯ, ಸಮಾನತೆ ಮತ್ತು ಅನಕ್ಷರತೆ , ಬಾಲ್ಯ ಕಾರ್ಮಿಕರ ಕುರಿತ “ಜಾಗೃತಿ ಬೆಳಕು” ಬೀದಿ ನಾಟಕ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಬಾಸಾಹೇಬ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲಾ ಕಾಲೇಜುಗಳಲ್ಲಿ ರಂಗ ಶಿಕ್ಷಕರ ನೇಮಕ ಮಾಡುವುದು ಅವಶ್ಯವಾಗಿದೆ. ಸಾಂಸ್ಕೃತಿ ಶಾಂತಿಯಿಂದಲೇ ಕ್ರಾಂತಿಯೆಂದು ಹೇಳಿದರು.
ಕಾರ್ಯಕ್ರಮವು ಸಾಂಸ್ಕೃತಿಕ ಜಾಗೃತಿಗೆ ಪ್ರೇರಣೆ ನೀಡುವಂತಾಗಿ ಯಶಸ್ವಿಯಾಗಿ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಆಂಜನೇಯ ಸೇರಿದಂತೆ ವಿವಿಧ ಗಣ್ಯರು ಹಾಗೂ ಮಹಾಂತೇಶ ರಹವಾಸಿಗಳ ಸಂಘದ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ರಂಗಭೂಮಿ ಕಲಾವಿದ ಬಸವರಾಜ ತಳವಾರ ನಿರೂಪಿಸಿದರು.


