ನವದೆಹಲಿ: ಎಲ್ಪಿಜಿ ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ
ದೇಶದಾದ್ಯಂತ ಲಾಕ್ಡೌನ್ ಜಾರಿಯಾಗಲಿದೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಈ ಕುರಿತು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇಂಧನ ವ್ಯತ್ಯಯ ಕುರಿತ ಕಳವಳಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
‘ದೇಶದಲ್ಲಿ ಲಾಕ್ಡೌನ್ ಜಾರಿಯಾಗಲಿದೆ ಎಂಬುದು ಶುದ್ಧ ಸುಳ್ಳು. ಅಂತಹ ಯಾವುದೇ ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸುತ್ತೇನೆ’ ಎಂದಿದ್ದಾರೆ.
ಸಚಿವರೂ ಆಗಿರುವ ಪುರಿ, ‘ತೈಲ, ಇಂಧನ ಹಾಗೂ ಇತರ ಅಗತ್ಯ ಸರಕುಗಳ ಸರಬರಾಜನ್ನು ಖಾತ್ರಿಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಯಾವುದೇ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸಜ್ಜಾಗಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
ಇಂತಹ ಜಾಗತಿಕ ಅನಿಶ್ಚಿತತೆ ಎದುರಾದಾಗ ಭಾರತ ಈ ಹಿಂದೆಯೂ ಪುಟಿದೇಳುವ ಸಾಮರ್ಥಯವನ್ನು ಪ್ರದರ್ಶಿಸಿದೆ. ಅದೇ ರೀತಿ ‘ಅಗತ್ಯಕ್ಕೆ ತಕ್ಕಂತೆ, ಪೂರ್ವ ಸಿದ್ಧತೆ ಮತ್ತು ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸುವುದನ್ನು ಭಾರತ ಮುಂದುವರಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಬೇಜನ್ಸಾರಿ ಹಾಗೂ ಸಮಸ್ಯೆ ಸೃಷ್ಟಿಸುವಂತಹ ವದಂತಿಗಳನ್ನು ಯಾರೂ ಹರಡಬಾರದರು ಎಂದೂ ಪುರಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


