ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ 2026ರ ಸಾಲಿನ ಎಸ್ಎಸ್ಎಲ್ಸಿ (SSLC) ಪರೀಕ್ಷೆ-1ರ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮಾರ್ಚ್ 30 ರಂದು ನಡೆಯಬೇಕಿದ್ದ ತೃತೀಯ ಭಾಷೆ ಪರೀಕ್ಷೆಯನ್ನು ಮಾರ್ಚ್ 31ರ ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರದ ಹೊಸ ಅಧಿಸೂಚನೆಯನ್ವಯ, ಈ ಹಿಂದೆ ಮಾರ್ಚ್ 31ರಂದು ಘೋಷಿಸಲಾಗಿದ್ದ ಮಹಾವೀರ ಜಯಂತಿ ಸಾರ್ವತ್ರಿಕ ರಜೆಯನ್ನು ಈಗ ಮಾರ್ಚ್ 30ರ ಸೋಮವಾರಕ್ಕೆ ಬದಲಾಯಿಸಲಾಗಿದೆ. ರಜೆ ದಿನಾಂಕದಲ್ಲಿನ ಈ ಮಾರ್ಪಾಡಿನಿಂದಾಗಿ, ಅಂದು ನಡೆಯಬೇಕಿದ್ದ ಪರೀಕ್ಷಾ ದಿನಾಂಕವನ್ನು ಬದಲಿಸುವುದು ಅನಿವಾರ್ಯವಾಗಿದೆ.
ಉಳಿದ ಪರೀಕ್ಷೆಗಳು ಯಥಾವತ್ತಾಗಿ ಸಾಗಲಿವೆ.
ತೃತೀಯ ಭಾಷೆ ವಿಷಯವನ್ನು ಹೊರತುಪಡಿಸಿ, ವೇಳಾಪಟ್ಟಿಯಲ್ಲಿರುವ ಉಳಿದ ಎಲ್ಲಾ ವಿಷಯಗಳ ಪರೀಕ್ಷೆಗಳು ಯಾವುದೇ ಬದಲಾವಣೆ ಇಲ್ಲದೆ ಮೊದಲಿನಂತೆಯೇ ನಡೆಯಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


