ಟೆಹರಾನ್ :ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧ ಆರಂಭವಾಗಿ ಮೂರು ವಾರಗಳು ಕಳೆದಿವೆ. ಆದರೆ ಈಗ ಇರಾನ್ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಕೇವಲ ಯುದ್ಧರಂಗದ ಕ್ಷಿಪಣಿಗಳಲ್ಲ, ಬದಲಾಗಿ ದೇಶದ ‘ಅಧಿಕಾರ ಕೇಂದ್ರ’ ಯಾರ ಬಳಿಯಿದೆ ಎಂಬುದು. ಇರಾನಿನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಮತ್ತು ಅವರ ನಂತರದ ಪ್ರಭಾವಿ ನಾಯಕ ಅಲಿ ಲಾರಿಜಾನಿ ಅವರ ಸಾವುಗಳು ಇರಾನಿನ ಉನ್ನತ ಆಡಳಿತ ಮಂಡಳಿಯನ್ನು ಅಕ್ಷರಶಃ ಛಿದ್ರಗೊಳಿಸಿವೆ.
ಬಾಹ್ಯ ದಾಳಿ ಮತ್ತು ಆಂತರಿಕ ಅಸ್ಥಿರತೆಯ ನಡುವೆ ಸಿಲುಕಿರುವ ಇರಾನ್ನಲ್ಲಿ ಈಗ ಅಸಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವವರು ಯಾರು? ಈ ಪ್ರಶ್ನೆಗೆ ಅಧಿಕೃತವಾದ ಒಂದು ಉತ್ತರವಿದ್ದರೆ, ಪ್ರಾಯೋಗಿಕವಾದ ಮತ್ತೊಂದು ಕಟು ಸತ್ಯವಿದೆ.
ಖಮೇನಿ ಪುತ್ರನಿಗೆ ಪಟ್ಟ: ಕಾಗದದ ಮೇಲಷ್ಟೇ ಸುಲ್ತಾನ?
ಅಧಿಕೃತ ವರದಿಗಳ ಪ್ರಕಾರ, ದಿವಂಗತ ಅಲಿ ಖಮೇನಿ ಅವರ 56 ವರ್ಷದ ಪುತ್ರ ಮೊಜ್ತಬಾ ಖಮೇನಿ ಅವರನ್ನು ತಂದೆಯ ಉತ್ತರಾಧಿಕಾರಿಯಾಗಿ ಪರಮೋಚ್ಚ ನಾಯಕನ ಸ್ಥಾನಕ್ಕೆ ಕೂಡ್ರಿಸಲಾಗಿದೆ. ಸದ್ಯಕ್ಕೆ ಅವರೇ ಸಶಸ್ತ್ರ ಪಡೆಗಳ ಮುಖ್ಯಸ್ಥ ಮತ್ತು ಕಾರ್ಯತಂತ್ರದ ನಿರ್ಧಾರಗಳ ಅಂತಿಮ ಧ್ವನಿ. ಆದರೆ, ಯುದ್ಧಕಾಲದ ನಾಯಕತ್ವವು ಕೇವಲ ಹುದ್ದೆಯಿಂದ ಬರುವುದಿಲ್ಲ. ಮೊಜ್ತಬಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಮತ್ತು ಅವರ ದೈಹಿಕ ಸ್ಥಿತಿಯ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ ಎತ್ತಿರುವ ಸಂಶಯಗಳು, ಇರಾನ್ ಮಿಲಿಟರಿಯನ್ನು ಅವರು ನಿಜವಾಗಿಯೂ ಮುನ್ನಡೆಸುತ್ತಿದ್ದಾರೆಯೇ ಎಂಬ ಬಗ್ಗೆ ಅನಿಶ್ಚಿತತೆಯನ್ನು ಮೂಡಿದೆ.
ಖಾಲಿಬಾಫ್: ರಾಜಕೀಯ ಮತ್ತು ಮಿಲಿಟರಿಯ ಹೊಸ ಕೊಂಡಿ
ಇರಾನ್ನ ಇತಿಹಾಸವನ್ನು ಗಮನಿಸಿದರೆ, ಬಿಕ್ಕಟ್ಟಿನ ಸಮಯದಲ್ಲಿ ಅಧಿಕಾರವು ಕೇವಲ ಒಂದು ಕಚೇರಿಗೆ ಸೀಮಿತವಾಗಿರುವುದಿಲ್ಲ. ಖಮೇನಿ ಮರಣದ ನಂತರ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕರ್ ಖಾಲಿಬಾಫ್ ಇರಾನಿನ ಹೊಸ ಶಕ್ತಿ ಕೇಂದ್ರವಾಗಿ ಉದಯಿಸುತ್ತಿದ್ದಾರೆ. ಧಾರ್ಮಿಕ ಬಣ, ಮಿಲಿಟರಿ ಪಡೆ ಮತ್ತು ರಾಜಕೀಯ ನಾಯಕರ ನಡುವೆ ಸಮನ್ವಯ ಸಾಧಿಸುವ ಏಕೈಕ ಕೊಂಡಿ ಇವರಾಗಿದ್ದಾರೆ. ರೆವಲ್ಯೂಷನರಿ ಗಾರ್ಡ್ಸ್ನ ಮಾಜಿ ಕಮಾಂಡರ್ ಮತ್ತು ಮಾಜಿ ಪೊಲೀಸ್ ಮುಖ್ಯಸ್ಥರಾಗಿರುವ ಖಾಲಿಬಾಫ್, ಬಲಪ್ರಯೋಗದ ಅಧಿಕಾರ ಮತ್ತು ರಾಜತಾಂತ್ರಿಕತೆಯ ಎರಡೂ ಆಯಾಮಗಳಲ್ಲಿ ಪಳಗಿದವರು.
ಲಾರಿಜಾನಿ ಸಾವು: ಮುರಿದುಬಿದ್ದ ಸಂವಹನ ಸೇತುವೆ
ಎರಡು ದಿನಗಳ ಹಿಂದೆ ನಡೆದ ಇಸ್ರೇಲ್ ದಾಳಿಯಲ್ಲಿ ನಂ. 2 ನಾಯಕ ಅಲಿ ಲಾರಿಜಾನಿ ಅವರ ಸಾವು ಇರಾನ್ಗೆ ಭರಿಸಲಾಗದ ನಷ್ಟವಾಗಿದೆ. ಅವರು ಕೇವಲ ಒಬ್ಬ ನಾಯಕರಾಗಿರಲಿಲ್ಲ; ಹಳೆಯ ಧಾರ್ಮಿಕ ವ್ಯವಸ್ಥೆ, ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ಇರಾನಿನ ಪ್ರಸ್ತುತ ರಾಜಕೀಯ ವ್ಯವಸ್ಥೆಯನಡುವೆ ಸೇತುವೆಯಾಗಿದ್ದವರು. ಅವರ ಅನುಪಸ್ಥಿತಿಯಲ್ಲಿ, ಇರಾನ್ನ ಅಧಿಕಾರವು ಕೇವಲ ‘ಹುದ್ದೆ’ ಹೊಂದಿರುವವರಿಂದ ಜಾರಿ, ಈಗ ನೇರವಾಗಿ ಮಿಲಿಟರಿ ಕಮಾಂಡ್ ಹೊಂದಿರುವವರ ಕೈ ಸೇರುತ್ತಿದೆ.
ಐಆರ್ಜಿಸಿ(IRGC)ಯೇ ಈಗ ಸರ್ಕಾರ, ಸರ್ಕಾರವೇ ಐಆರ್ಜಿಸಿ
“ಇರಾನ್ ರೆವಲ್ಯೂಷನರಿ ಗಾರ್ಡ್ (IRGC) ಈಗ ಕೇವಲ ಒಂದು ಪಡೆಯಲ್ಲ, ಅದುವೇ ಇರಾನ್ ಸರ್ಕಾರ” ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಆಂತರಿಕ ಭದ್ರತೆ, ಕ್ಷಿಪಣಿ ತಂತ್ರಜ್ಞಾನ, ಗುಪ್ತಚರ ಮತ್ತು ದೇಶದ ಆರ್ಥಿಕತೆಯನ್ನು ನಿಯಂತ್ರಿಸುತ್ತಿದ್ದ ಐಆರ್ಜಿಸಿ(IRGC), ಈಗ ಯುದ್ಧದ ಸಮಯದಲ್ಲಿ ಸಂಪೂರ್ಣ ಅಧಿಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಂತೆ ಕಾಣುತ್ತಿದೆ.
ಗಮನಾರ್ಹ ಸಂಗತಿಯೆಂದರೆ, ಇರಾನ್ನ ಮಿಲಿಟರಿ ಕಾರ್ಯಾಚರಣೆಗಳು ಈಗ ಮೇಲಿನಿಂದ ಬರುವ ಒಂದೇ ಆದೇಶಕ್ಕೆ ಕಾಯುತ್ತಿಲ್ಲ. ಬದಲಾಗಿ ‘ವಿಕೇಂದ್ರೀಕೃತ ಕಾರ್ಯಾನುಷ್ಠಾನ’ದ ಮೂಲಕ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಇದರರ್ಥ, ಉನ್ನತ ನಾಯಕರ ಹತ್ಯೆಯಾದರೂ ಇರಾನ್ನ ಮಿಲಿಟರಿ ವ್ಯವಸ್ಥೆ ತಕ್ಷಣವೇ ಕುಸಿಯುವುದಿಲ್ಲ. ಇರಾನ್ ಕೇವಲ ಒಬ್ಬ ವ್ಯಕ್ತಿಯ ವರ್ಚಸ್ಸಿನ ಮೇಲೆ ನಿಂತಿಲ್ಲ, ಬದಲಾಗಿ ಹತ್ತಾರು ಸಣ್ಣ ಶಕ್ತಿ ಕೇಂದ್ರಗಳ ಮೇಲೆ ಅದು ನಿರ್ಮಿತವಾಗಿದೆ.
ಕಾಗದದ ಮೇಲೆ ಮೊಜ್ತಬಾ ಖಮೇನಿ ಸರ್ವೋಚ್ಚ ನಾಯಕನಾಗಿರಬಹುದು, ರಾಜಕೀಯ ವೇದಿಕೆಯಲ್ಲಿ ಖಾಲಿಬಾಫ್ ಮುಂಚೂಣಿಯಲ್ಲಿರಬಹುದು. ಆದರೆ ಇಂದಿನ ಇರಾನ್ನ ಅಸ್ತಿತ್ವ ಮತ್ತು ಹೋರಾಟದ ನಿಜವಾದ ನಿಯಂತ್ರಣವಿರುವುದು ಇರಾನ್ ರೆವಲ್ಯೂಷನರಿ ಗಾರ್ಡ್ (IRGC) ಬಳಿ. ಇರಾನ್ನಲ್ಲಿ ಇದ್ದ ಧಾರ್ಮಿಕ ನಾಯಕತ್ವದ ರಾಜಕೀಯ ಮತ್ತು ಮಿಲಿಟರಿ ಶಕ್ತಿಯ ನಡುವಿನ ಸಮತೋಲನ ಈಗ ಸಂಪೂರ್ಣವಾಗಿ ಮಿಲಿಟರಿಯತ್ತ ವಾಲಿರುವುದು ಸ್ಪಷ್ಟವಾಗಿದೆ.


