ದೋಹಾ: ಕತಾರ್ ಮೇಲೆ ಇರಾನ್ ನಡೆಸಿದ ದಾಳಿಯಿಂದಾಗಿ ಕತಾರ್ನ ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತು ಸಾಮರ್ಥ್ಯದ ಶೇ. 17 ರಷ್ಟು ಭಾಗ ಸ್ಥಗಿತಗೊಂಡಿದೆ. ಇದರಿಂದಾಗಿ ವಾರ್ಷಿಕವಾಗಿ ಅಂದಾಜು $20 ಬಿಲಿಯನ್ (ಸುಮಾರು ₹1.6 ಲಕ್ಷ ಕೋಟಿ) ಆದಾಯ ನಷ್ಟವಾಗಲಿದೆ ಎಂದು ‘ಕತಾರ್ ಎನರ್ಜಿ’ ಸಿಇಒ ಮತ್ತು ಇಂಧನ ವ್ಯವಹಾರಗಳ ರಾಜ್ಯ ಸಚಿವ ಸಾದ್ ಅಲ್-ಕಾಬಿ ತಿಳಿಸಿದ್ದಾರೆ.
ಅಲ್-ಕಾಬಿ ಅವರ ಪ್ರಕಾರ, ಈ ದಾಳಿಯಿಂದ ಉಂಟಾದ ಹಾನಿಯನ್ನು ಸರಿಪಡಿಸಲು 3 ರಿಂದ 5 ವರ್ಷಗಳು ಬೇಕಾಗಬಹುದು. ಅಲ್ಲಿಯವರೆಗೆ ವಾರ್ಷಿಕವಾಗಿ 12.8 ಮಿಲಿಯನ್ ಟನ್ ಎಲ್ಎನ್ಜಿ ಉತ್ಪಾದನೆ ಕುಂಠಿತಗೊಳ್ಳಲಿದೆ. ಇದು ಯುರೋಪ್ ಮತ್ತು ಏಷ್ಯಾದ ರಾಷ್ಟ್ರಗಳಾದ ಚೀನಾ ಮತ್ತು ಭಾರತಕ್ಕೆ ಪೂರೈಕೆಯಾಗುವ ಅನಿಲದ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಯಾವ ಘಟಕಗಳಿಗೆ ಹಾನಿ?
ಕಳೆದ ಕೆಲವು ದಿನಗಳಲ್ಲಿ ಇರಾನ್ ನಡೆಸಿದ ದಾಳಿಯಲ್ಲಿ ಕತಾರ್ನ 14 ಎಲ್ಎನ್ಜಿ ಟ್ರೇನ್ಗಳ ಪೈಕಿ ಕನಿಷ್ಠ ಎರಡು ಘಟಕಗಳು ಮತ್ತು ಅದರ ಎರಡು ಗ್ಯಾಸ್-ಟು-ಲಿಕ್ವಿಡ್ಸ್ (GTL) ಘಟಕಗಳಲ್ಲಿ ಒಂದು ಘಟಕ ಸಂಪೂರ್ಣ ಹಾನಿಗೊಳಗಾಗಿದೆ.
“ವಿಶೇಷವಾಗಿ ಪವಿತ್ರ ರಂಜಾನ್ ಮಾಸದಲ್ಲಿ, ಒಂದು ಸಹೋದರ ಮುಸ್ಲಿಂ ರಾಷ್ಟ್ರದಿಂದ ಕತಾರ್ ಮತ್ತು ಈ ಪ್ರದೇಶದ ಮೇಲೆ ಇಂತಹ ದಾಳಿ ನಡೆಯುತ್ತದೆ ಎಂದು ನಾನು ನನ್ನ ಕನಸಿನಲ್ಲೂ ಯೋಚಿಸಿರಲಿಲ್ಲ,” ಎಂದು ಅಲ್-ಕಾಬಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಫೋರ್ಸ್ ಮೆಜರ್ (Force Majeure) ಘೋಷಣೆ
ಎರಡು ಪ್ರಮುಖ ಘಟಕಗಳು ಹಾನಿಗೊಳಗಾಗಿರುವುದರಿಂದ ಇಟಲಿ, ಬೆಲ್ಜಿಯಂ, ದಕ್ಷಿಣ ಕೊರಿಯಾ ಮತ್ತು ಚೀನಾ ದೇಶಗಳೊಂದಿಗೆ ಮಾಡಿಕೊಂಡಿರುವ ದೀರ್ಘಕಾಲದ ಒಪ್ಪಂದಗಳ ಮೇಲೆ ಕತಾರ್ ಎನರ್ಜಿ ‘ಫೋರ್ಸ್ ಮೆಜರ್’ (ಅನಿವಾರ್ಯ ಪರಿಸ್ಥಿತಿಯ ಕಾರಣ ಪೂರೈಕೆ ಸ್ಥಗಿತ) ಘೋಷಿಸಿದೆ. “ನಾವು ಈಗಾಗಲೇ ಅಲ್ಪಾವಧಿಯ ಒಪ್ಪಂದಗಳಿಗೆ ಇದನ್ನು ಘೋಷಿಸಿದ್ದೆವು, ಈಗ ದೀರ್ಘಕಾಲದ ಒಪ್ಪಂದಗಳಿಗೂ ಇದು ಅನ್ವಯವಾಗಲಿದೆ” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ವಿಶ್ವದ ಅತಿದೊಡ್ಡ ಪ್ಲಾಂಟ್ ಮೇಲೆ ದಾಳಿ
ಬುಧವಾರ ಇರಾನ್ ಕ್ಷಿಪಣಿಗಳು ಕತಾರ್ನ ಅತಿದೊಡ್ಡ ಎಲ್ಎನ್ಜಿ ಪ್ಲಾಂಟ್ ಆಗಿರುವ ‘ರಾಸ್ ಲಾಫನ್’ ಮೇಲೆ ದಾಳಿ ನಡೆಸಿದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಈ ದಾಳಿಯ ನಂತರ ಕತಾರ್ ಎನರ್ಜಿ ತನ್ನ ಒಟ್ಟು ಎಲ್ಎನ್ಜಿ ಉತ್ಪಾದನೆಯ ಮೇಲೆ ಫೋರ್ಸ್ ಮೆಜರ್ ಘೋಷಿಸಬೇಕಾಯಿತು. “ಉತ್ಪಾದನೆ ಮತ್ತೆ ಆರಂಭವಾಗಬೇಕಾದರೆ ಮೊದಲು ಯುದ್ಧ ನಿಲ್ಲಬೇಕು” ಎಂದು ಕಾಬಿ ಹೇಳಿದ್ದಾರೆ. ಈ ಹಾನಿಯು ಈ ಪ್ರದೇಶದ ಅಭಿವೃದ್ಧಿಯನ್ನು 10 ರಿಂದ 20 ವರ್ಷಗಳಷ್ಟು ಹಿಂದಕ್ಕೆ ತಳ್ಳಿದೆ ಮತ್ತು ಕತಾರ್ನ ‘ಸುರಕ್ಷಿತ ತಾಣ’ ಎಂಬ ಇಮೇಜ್ಗೆ ಧಕ್ಕೆ ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಪಾಲುದಾರರಿಗೆ ನಷ್ಟ
ಹಾನಿಗೊಳಗಾದ ಎಲ್ಎನ್ಜಿ ಘಟಕಗಳಲ್ಲಿ ಅಮೆರಿಕದ ExxonMobil ಸಂಸ್ಥೆಯು ಪಾಲುದಾರಿಕೆ ಹೊಂದಿದೆ (S4 ನಲ್ಲಿ ಶೇ. 34 ಮತ್ತು S6 ನಲ್ಲಿ ಶೇ. 30 ಪಾಲು). ಹಾನಿಗೊಳಗಾದ GTL ಘಟಕದಲ್ಲಿ ಶೆಲ್ (Shell)ಸಂಸ್ಥೆಯು ಪಾಲುದಾರನಾಗಿದ್ದು, ಇದನ್ನು ಸರಿಪಡಿಸಲು ಒಂದು ವರ್ಷ ಬೇಕಾಗಬಹುದು.
S4 ಘಟಕದ ಹಾನಿಯಿಂದ ಇಟಲಿಯ ಎಡಿಸನ್ ಮತ್ತು ಬೆಲ್ಜಿಯಂನ EDFT ಗೆ ಪೂರೈಕೆ ಕಡಿತವಾಗಲಿದೆ. S6 ಘಟಕದ ಹಾನಿಯಿಂದ ದಕ್ಷಿಣ ಕೊರಿಯಾದ KOGAS ಮತ್ತು ಚೀನಾದ ಶೆಲ್ ಕಂಪನಿಗಳಿಗೆ ಹೊಡೆತ ಬೀಳಲಿದೆ.
ಇತರೆ ಉತ್ಪನ್ನಗಳ ಮೇಲಿನ ಪರಿಣಾಮ
ಕೇವಲ ಎಲ್ಎನ್ಜಿ ಮಾತ್ರವಲ್ಲದೆ ಇತರ ಉತ್ಪನ್ನಗಳ ರಫ್ತಿನಲ್ಲೂ ಇಳಿಕೆಯಾಗಲಿದೆ: ಕಂದನ್ಸೇಟ್ (Condensate): ಶೇ. 24 ರಷ್ಟು ಇಳಿಕೆಯಾಗಲಿದೆ, ಎಲ್ಪಿಜಿ (LPG) ಉತ್ಪಾದನೆಯಲ್ಲಿ ಶೇ. 13 ರಷ್ಟು ಇಳಿಕೆ, ಹೀಲಿಯಂ (Helium) ಉತ್ಪಾದನೆಯಲ್ಲಿ ಶೇ. 14 ರಷ್ಟು ಇಳಿಕೆ (ಇದು ದಕ್ಷಿಣ ಕೊರಿಯಾದ ಚಿಪ್ ತಯಾರಕರಿಗೆ ಅಗತ್ಯ) ಹಾಗೂ ನ್ಯಾಪ್ತಾ ಮತ್ತು ಸಲ್ಫರ್ ಉತ್ಪಾದನೆಯಲ್ಲಿ ಶೇ. 6 ರಷ್ಟು ಇಳಿಕೆಯಾಗಲಿದೆ. ಹಾನಿಗೊಳಗಾದ ಈ ಘಟಕಗಳ ನಿರ್ಮಾಣಕ್ಕೆ ಸರಿಸುಮಾರು $26 ಬಿಲಿಯನ್ ವೆಚ್ಚವಾಗಿತ್ತು ಎಂದು ಅಲ್-ಕಾಬಿ ಮಾಹಿತಿ ನೀಡಿದ್ದಾರೆ.
ಭಾರತಕ್ಕೆ ಉಂಟಾಗಬಹುದಾದ ತೊಂದರೆ
ಭಾರತವು ತನ್ನ ಒಟ್ಟು ನೈಸರ್ಗಿಕ ಅನಿಲದ ಅಗತ್ಯದ ಸುಮಾರು ಶೇ. 20 ರಷ್ಟನ್ನು ಕತಾರ್ನಿಂದ ಆಮದು ಮಾಡಿಕೊಳ್ಳುತ್ತದೆ. ಕತಾರ್ನ ಎಲ್ಪಿಜಿ ರಫ್ತು ಕುಸಿತವು ಭಾರತದ ಹೋಟೆಲ್ ಉದ್ಯಮ ಮತ್ತು ರೆಸ್ಟೋರೆಂಟ್ಗಳಲ್ಲಿ ಬಳಸುವ ಗ್ಯಾಸ್ ಪೂರೈಕೆಯ ಮೇಲೆ ನೇರ ಪರಿಣಾಮ ಬೀರಲಿದೆ.
ಕತಾರ್ನ ಬೃಹತ್ ‘ನಾರ್ತ್ ಫೀಲ್ಡ್’ ವಿಸ್ತರಣಾ ಯೋಜನೆಯ ಕೆಲಸಗಳು ಸದ್ಯ ಸ್ಥಗಿತಗೊಂಡಿದ್ದು, ಇದು ಒಂದು ವರ್ಷಕ್ಕೂ ಹೆಚ್ಚು ಕಾಲ ವಿಳಂಬವಾಗಬಹುದು. “ಇಸ್ರೇಲ್ ಮತ್ತು ಇರಾನ್ ನಡುವಿನ ಜಗಳಕ್ಕೂ ನಮಗೂ ಸಂಬಂಧವಿಲ್ಲ. ಜಗತ್ತಿನ ಯಾವುದೇ ದೇಶವಿರಲಿ, ತೈಲ ಮತ್ತು ಅನಿಲ ಘಟಕಗಳ ಮೇಲೆ ದಾಳಿ ನಡೆಸುವುದರಿಂದ ದೂರವಿರಬೇಕು” ಎಂದು ಸಾದ್ ಅಲ್-ಕಾಬಿ ಮನವಿ ಮಾಡಿದ್ದಾರೆ.


