ಬೆಳಗಾವಿ: ನಗರದ ಶ್ರೀ ಬಸವೇಶ್ವರ ವೃತ್ತದ ಉದ್ಯಾನವನದಲ್ಲಿ ಮಹಾನ ಮಾನವತಾವಾದಿ, ಜಗಜ್ಯೋತಿ ಬಸವಣ್ಣನವರ ನೂತನ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ಹಿರಿಯರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.
ವಿಶ್ವಗುರು ಬಸವೇಶ್ವರರ ಪ್ರತಿಮೆಯನ್ನು ಬೆಳಗಾವಿಯ ಹೃದಯ ಭಾಗವಾಗಿರುವ ಗೋವಾವೇಸ್ ಸರ್ಕಲ್ ನಲ್ಲಿ ಪ್ರತಿಷ್ಠಾಪಿಸಲಾಗುವುದು. ಕಳೆದ ಮೂರು ವರ್ಷಗಳಿಂದ ಮೂರ್ತಿ ತಯಾರಾಗಿದ್ದರು ಅನಿವಾರ್ಯ ಕಾರಣಾಂತರಗಳಿಂದ ಕಾಮಗಾರಿಯು ನನೆಗುದಿಗೆ ಬಿದ್ದಿತ್ತು. ಈಗ ನೆರವೇರಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಸೊಲ್ಲಾಪುರದಲ್ಲಿ 15 ಅಡಿ ಎತ್ತರದ ಬಸವಣ್ಣವರ ಕಂಚಿನ ಮೂರ್ತಿ ಸಿದ್ದಗೊಂಡಿದೆ, ಮೂರು ವರ್ಷಗಳಿಂದ ಮೂರ್ತಿಯನ್ನು ಅಲ್ಲಿಯೇ ಇಡಲಾಗಿತ್ತು ಈಗ ಕೆ ಎಲ್ ಈ ಸಂಸ್ಥೆಯು ಅಡಿಗಲ್ಲನ್ನು ನಿರ್ಮಿಸಲಿದ್ದು ಇದರ ಮೇಲೆ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ ಬೆಳಗಾವಿ ಪ್ರಪ್ರಥಮ ಎತ್ತರದ ಬಸವಣ್ಣವರ ಪ್ರತಿಮೆ ಇದಾಗಲಿದೆ. ಶಾಸಕ ಅಭಯ ಪಾಟೀಲ ಅವರು ಹಾಗೂ ಮಹಾನಗರ ಪಾಲಿಕೆಯ ಎಲ್ಲರ ಪರಿಶ್ರಮದಿಂದ ಬಸವಣ್ಣವರ ಪ್ರತಿಮೆ ಸಿದ್ಧಗೊಂಡು ಈಗ ಕಾರ್ಯಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಇದು ಸಮಸ್ತ ಬಸವ ಅಭಿಮಾನಿಗೆ ಹೆಮ್ಮೆಯನ್ನು ಉಂಟು ಮಾಡಿದೆ ಹಾಗೂ ಹರ್ಷವನ್ನು ತಂದಿದೆ ಎಂದು ಹೇಳಿದರು
ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆಯ ಈ ಸತ್ಕಾರ್ಯದಲ್ಲಿ ಮುತುವರ್ಜಿ ವಹಿಸಿ ಶ್ರಮಿಸಿ ಅನುದಾನ ನೀಡಿದ ಶಾಸಕ ಅಭಯ ಪಾಟೀಲ, ತಮ್ಮ ಹಿತಾಸಕ್ತಿಯಿಂದ ಈ ಕಾರ್ಯ ಜರುಗುವಂತೆ ಮಾರ್ಗದರ್ಶನ ನೀಡಿ ಸಹಕಾರ ಮಾಡುತ್ತಿರುವ ಕೆ ಎಲ್ ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಬೆಳಗಾವಿಯ ಹಿರಿಯ ನ್ಯಾಯವಾದಿ, ಸಮಾಜದ ಪ್ರಮುಖ ಎಂ.ಬಿ. ಜಿರಲಿ , ಮಹಾನಗರ ಪಾಲಿಕೆಯ ಪ್ರಥಮ ಪ್ರಜೆ ಮೇಯರ್ ಪ್ರೀತಿ ಕಾಮಕರ, ಉಪ ಮೇಯರ್ ಹಮಮಂತ ಕೊಂಗಾಲಿ, ವೀರಶೈವ ಮಹಾಸಭೆಯ ಜಿಲ್ಲಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಶಿವನಗೌಡ ಪಾಟೀಲ, ಬಿಜೆಪಿ ಮುಖಂಡ ಮಹಾಂತೇಶ ವಕ್ಕುಂದ,ಆರ್. ಎಸ್. ಪಾಟೀಲ ಸೇರಿದಂತೆ ಬಸವಣ್ಣನವರ ಅಭಿಮಾನಿಗಳು, ಹಿರಿಯರು, ಪ್ರಮುಖರು ಉಪಸ್ಥಿತರಿದ್ದರು.


