ಬೆಳಗಾವಿ : ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡಲು ವಿಮಾನ ಹಾರಾಟಕ್ಕೆ ಕೆಲವೊಂದು ಮೂಲ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದಲ್ಲಿ ಮಾತ್ರ ಈ ಬೇಡಿಕೆಯನ್ನು ಈಡೇರಿಸಲು ಸಾಧ್ಯವೆಂದು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಅವರು ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಈ ವಿಷಯದ ಬಗ್ಗೆ ದಿನಾಂಕ: 12-08-2025 ರಂದು ಬರೆದ ಪತ್ರದ ಪ್ರತಿಯನ್ನು ಲಗತ್ತಿಸಿ, ಶೆಟ್ಟರ ಅವರು ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡುವ ಅವಶ್ಯಕತೆಯ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿ, ಕೇಂದ್ರ ವಿಮಾನಯಾನ ಸಚಿವರಿಗೆ ದಿನಾಂಕ: 03-02-2026 ರಂದು ಭೇಟಿಯಾಗಿ ಮನವಿ ಪತ್ರ ನೀಡಿದ್ದು, ಇಲ್ಲಿ ಸ್ಮರಣೀಯ.
ಇದಕ್ಕೆ ಉತ್ತರವಾಗಿ ಕೇಂದ್ರ ವಿಮಾನಯಾನ ಸಚಿವರು ಸಂಸದರಿಗೆ ದಿನಾಂಕ: 12-03-2026 ಪತ್ರ ಬರೆದಿದ್ದು, ಇದರಲ್ಲಿ ಈಗಿರುವ ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡಲು ಕೆಲವು ಮೂಲ ಹಾಗೂ ಅಗತ್ಯ ಸೌಲಭ್ಯಗಳ ಲಭ್ಯತೆ ಅವಶ್ಯವಿರುವುದನ್ನು ಅಂದರೆ ವಿಶೇಷವಾಗಿ 1) ರನ್ವೇ ಉದ್ದಳತೆ, 2) ಇನ್ಸಟ್ರುಮೇಂಟ್ ಲ್ಯಾಂಡಿಗ್ ಸಿಸ್ಟಮ್, 3) ಲೈಟಿಂಗ್ ವ್ಯವಸ್ಥೆ ಮತ್ತು ಅಗತ್ಯ ಸೇವೆಗಳು, (ವಲಸೆ (Immigration) ಆರೋಗ್ಯ, ಪ್ರಾಣಿ ಮತ್ತು ಸಸ್ಯ ಕ್ವಾರಂಟೈನ್ನಂತಹ ಅಗತ್ಯ ಸೇವೆಗಳನ್ನು ಒಳಗೊಂಡಂತೆ) ಹೊರ ದೇಶಕ್ಕೆ ತೆರಳಲಿರುವ ಪ್ರಯಾಣಿಕರ ಸಂಖ್ಯಾಬಲ ಹೀಗೆ ಇನ್ನು ಇತ್ಯಾದಿ ವಿಷಯಗಳ ಬಗ್ಗೆ ಮಹಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುವುದು.
ಈ ಎಲ್ಲ ಅಂಶಗಳ ಪರಿಗಣನೆಯೊಂದಿಗೆ ವಿಮಾನಯಾನ ಸಂಸ್ಥೆಗಳು ಹಾರಾಟ ಪ್ರಾರಂಭಿಸಲು ಮುಂದೆ ಬಂದಲ್ಲಿ ಮುಂಬರುವ ದಿನಗಳಲ್ಲಿ ಅವಶ್ಯವಾಗಿ ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಲು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಅನುಕೂಲಕರವೆಂದು ಕೇಂದ್ರ ಸಚಿವರು ತಮಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವ ಬಗ್ಗೆ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


