ಬೆಳಗಾವಿ: ಅಣಕು ನ್ಯಾಯಾಲಯ ಸ್ಪರ್ಧೆ ವಿದ್ಯಾರ್ಥಿಗಳ ಭವಿಷ್ಯದ ವೃತ್ತಿ ಜೀವನಕ್ಕೆ ಮಹತ್ವದ ಹೆಜ್ಜೆಯಾಗಿದೆ ಎಂದು ನ್ಯಾಯಮೂರ್ತಿ ವಿಜಯಕುಮಾರ ಎ. ಪಾಟೀಲ ಹೇಳಿದರು.
ರವಿವಾರ ನಗರದ ಕೆಎಲ್ ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ 16 ನೇ ಎಂ.ಕೆ. ನಂಬಿಯಾರ್ ಸ್ಮಾರಕ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆ ಅತ್ಯಂತ ಮಹತ್ವದ್ದು. ಈ ಸ್ಪರ್ಧೆಯಲ್ಲಿ ಕಾನೂನು ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಬರವಣಿಗೆ, ಕರಡು ಪರಿಶೀಲನೆ, ಅಭಿವ್ಯಕ್ತಿ ಕೌಶಲ ಮತ್ತು ಇತರ ಸಂಗತಿಗಳನ್ನು ನಿರೂಪಿಸಲು ಸಹಕಾರಿಯಾಗುತ್ತದೆ. ಕಾನೂನು ವಿದ್ಯಾರ್ಥಿಗಳು ಕಾನೂನು ಮತ್ತು ನ್ಯಾಯಾಲಯಗಳ ಕೆಲಸವನ್ನು ಅರ್ಥೈಸಿಕೊಳ್ಳಲು ಇದೊಂದು ಮಹತ್ವದ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.
ನ್ಯಾಯವಾದಿ ಮತ್ತು ಕೆಎಲ್ ಎಸ್ ಸೊಸೈಟಿ ಚೇರ್ಮನ್ ಎ.ಕೆ. ಟಗಾರೆ ಅವರು ಕರ್ನಾಟಕ ಕಾನೂನು ಸಂಸ್ಥೆ(ಕೆಎಲ್ ಎಸ್)ಬಗ್ಗೆ ವಿವರಿಸಿದರು.
ನ್ಯಾಯವಾದಿ ಮತ್ತು ಕೆಎಲ್ ಎಸ್ ಅಧ್ಯಕ್ಷ ಪ್ರದೀಪ ಸಾಹುಕಾರ್ ಅವರು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ ಅವರೊಂದಿಗೆ ವಕೀಲರಾಗಿ ಕಳೆದ ನೆನಪುಗಳನ್ನು ನೆನಪಿಸಿಕೊಂಡರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ವೃತ್ತಿಯಲ್ಲಿ ಪ್ರಾಮಾಣಿಕರಾಗಬೇಕು. ಕಠಿಣ ಪರಿಶ್ರಮದಿಂದ ಕೆಲಸ ಮಾಡಬೆಕೆಂದು ಸಲಹೆ ನೀಡಿದರು.
ಚೆನ್ನೈನ ಸ್ಕೂಲ್ ಆಫ್ ಎಕ್ಸಲೆನ್ಸ್ ಇನ್ ಲಾ, ಸ್ಪರ್ಧೆಯಲ್ಲಿ ₹50,000 ನಗದು ಮತ್ತು ಟ್ರೋಫಿಯನ್ನು ಗೆದ್ದುಕೊಂಡಿತು. ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜು ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ, ₹30,000 ನಗದು ಮತ್ತು ಟ್ರೋಫಿಯನ್ನು ಗೆದ್ದುಕೊಂಡಿತು.
ಬೆಸ್ಟ್ ಮೆಮೋರಿಯಲ್ ಪ್ರಶಸ್ತಿ ಬೆಂಗಳೂರಿನ ಅಲೈಯನ್ಸ್ ವಿಶ್ವವಿದ್ಯಾಲಯದ ಪಾಲಾಯಿತು. ₹15,000 ನಗದು ಬಹುಮಾನವನ್ನು ಗೆದ್ದುಕೊಂಡಿತು.
ಅತ್ಯುತ್ತಮ ವಾದ ಮಂಡನೆಯ ಪುರುಷರ ವಿಭಾಗದಲ್ಲಿ
ಮುಂಬೈಯ ಅಡ್ವೊಕೇಟ್ ಬಾಳಾಸಾಹೇಬ್ ಆಪ್ಟೆ ಕಾನೂನು ಕಾಲೇಜಿನ ತಮೀಮ್ ಜಮಾದಾರ ಪಡೆದರು. ₹ 6,050 ನಗದು ಬಹುಮಾನವುಳ್ಖ ನ್ಯಾಯವಾದಿ ಅಶೋಕ .ಎನ್. ಪೋತದಾರ್ ಅತ್ಯುತ್ತಮ ವಾದ ಮಂಡನೆ ಪ್ರಶಸ್ತಿಯೂ ಸಹ ತಮೀಮ್ ಜಮಾದಾರ ಅವರ ಪಾಲಾಯಿತು.
ನೋಯ್ಡಾದ ಸಿಂಬೋಸಿಸ್ ಕಾನೂನು ಕಾಲೇಜಿನ ವಿದ್ಯಾರ್ಥಿನಿ ದೃಷ್ಟಿ ಬನ್ಸಾಲ್ ಅತ್ಯುತ್ತಮ ವಾದಮಂಡನೆ ಮತ್ತು 15000 ರೂ. ನಗದು ಬಹುಮಾನವನ್ನು ಪಡೆದರು. ಅಥರ್ವ್ ವೈದ್ಯ ಅವರು ಅತ್ಯುತ್ತಮ ಸಂಶೋಧಕ ಪ್ರಶಸ್ತಿ ಮತ್ತು ರೂ.10,000 ನಗದು ಬಹುಮಾನ ಪಡೆದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ನ್ಯಾಯವಾದಿ ಆರ್.ಎಸ್. ಮುತಾಲಿಕ್ ಸ್ವಾಗತಿಸಿ ಬೆಳಗಾವಿ ನಗರದ ಐತಿಹಾಸಿಕ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಮೂಟ್ ಕೋರ್ಟ್ ಸಂಯೋಜಕಿ ಪ್ರೊ. ಅಶ್ವಿನಿ ಪರಬ್ ಬಹುಮಾನ ಘೋಷಿಸಿದರು. ಪ್ರಾಚಾರ್ಯ ಡಾ. ಎ.ಎಚ್. ಹವಾಲ್ದಾರ್, ಮೂಟ್ ಕೋರ್ಟ್ ವಿದ್ಯಾರ್ಥಿ ಸಂಯೋಜಕಿ ಸುನಿಧಿ ಜೋಶಿ, ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


