ಚೆನ್ನೈ: ತಮಿಳುನಾಡಿನ ಕವಿ ಹಾಗೂ ಗೀತರಚನೆಕಾರ ವೈರಮುತ್ತು ಅವರು 2025ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
1975ರಲ್ಲಿ ಅಖಿಲನ್ ಮತ್ತು 2002ರಲ್ಲಿ ಜಯಕಾಂತನ್ ನಂತರ, ಜ್ಞಾನಪೀಠ ಪ್ರಶಸ್ತಿ ಪಡೆದ ತಮಿಳುನಾಡಿನ ಮೂರನೇ ಸಾಹಿತಿ ಇವರು.
ತಮ್ಮ ಸಾಹಿತ್ಯಕ್ಕಾಗಿ ಏಳು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದು, ಪದ್ಮಶ್ರೀ ಮತ್ತು ಪದ್ಮಭೂಷಣ ಗೌರವಗಳಿಗೂ ಭಾಜನರಾಗಿದ್ದಾರೆ. 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, 7,500ಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
‘ಸಾಹಿತ್ಯದಲ್ಲಿ ಶ್ರೇಷ್ಠವಾದುದಕ್ಕಿಂತ ಜ್ಞಾನಪೀಠ ಶ್ರೇಷ್ಠ. ತಮಿಳಿಗೆ ಅದು ಅಪರೂಪಕ್ಕಿಂತ ಅಪರೂಪ. ಭಾರತೀಯ ಸಾಹಿತ್ಯದ ನೊಬೆಲ್ ಎಂದು ಅಕ್ಷರ ಜಗತ್ತು ಪರಿಗಣಿಸುವ ಜ್ಞಾನಪೀಠ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ತುಂಬಾ ಸಂತೋಷವಾಗುತ್ತದೆ’ ಎಂದು ವೈರಮುತ್ತು ಸಂತಸ ವ್ಯಕ್ತಪಡಿಸಿದ್ದಾರೆ.
‘ತಮಿಳು ಕಾವ್ಯಕ್ಕೆ ಎಂದಿಗೂ ಜ್ಞಾನಪೀಠ ಪ್ರಶಸ್ತಿ ಸಂದಿಲ್ಲ ಎಂಬ ದೀರ್ಘಕಾಲದ ಕೊರಗು ನನ್ನೊಂದಿಗೆ ಕೊನೆಗೊಳ್ಳುತ್ತದೆ. ನನ್ನನ್ನು ಪೋಷಿಸಿ, ಬೆಳೆಸಿದ ತಮಿಳು ಸಮಾಜವನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ’ ಎಂದು ಹೇಳಿದ್ದಾರೆ.
‘ವೈರಮುತ್ತು ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ತಮಿಳುನಾಡು ಮತ್ತು ತಮಿಳು ಭಾಷೆಗೆ ಸಂದ ದೊಡ್ಡ ಗೌರವ’ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬಣ್ಣಿಸಿದ್ದಾರೆ.
ವಿವಾದಿತ ವ್ಯಕ್ತಿಗೆ ಪ್ರಶಸ್ತಿ: ಆರೋಪ
ಹಿನ್ನೆಲೆ ಗಾಯಕಿ ಚಿನ್ಮಯಿ ಸೇರಿದಂತೆ ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ವೈರಮುತ್ತು ಅವರ ಮೇಲಿದೆ. ‘ಅನೇಕ ಮಹಿಳೆಯರಿಂದ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಸಾಹಿತ್ಯದ ಉನ್ನತ ಪ್ರಶಸ್ತಿಯನ್ನು ಹೇಗೆ ನೀಡಲು ಸಾಧ್ಯ’ ಎಂದು ಕೆಲವರು ಪ್ರಶ್ನಿಸಿದ್ದಾರೆ. ‘ಕವಿ–ಗೀತರಚನೆಕಾರ ನಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅನೇಕ ಮಹಿಳೆಯರು 2018ರಲ್ಲಿ ಆರೋಪಿಸಿದ್ದರು. ಇಂದು ಅದೇ ವ್ಯಕ್ತಿಗೆ ಜ್ಞಾನಪೀಠ ಪ್ರಶಸ್ತಿ ಸಂದಿದೆ.
ಜಯಕಾಂತನ್ ಅವರಂತಹ ಮಹನೀಯರ ನಂತರ ಈ ಗೌರವ ಸಿಗುತ್ತಿದೆ. ಆದರೆ ಜಯಕಾಂತನ್ ಅವರ ಪುತ್ರಿಯೇ ವೈರಮುತ್ತು ವಿರುದ್ಧ ಧ್ವನಿ ಎತ್ತಿದ್ದರು. ಜಯಕಾಂತನ್ ತನ್ನನ್ನು ಹೊಗಳಿದ್ದಾರೆ ಎಂಬಂತೆ ನಕಲಿ ಪತ್ರವೊಂದನ್ನು ವೈರಮುತ್ತು ಸೃಷ್ಟಿಸಿದ್ದರೆಂದು ಅವರು ಆರೋಪಿಸಿದ್ದರು’ ಎಂದು ಹಿನ್ನೆಲೆ ಗಾಯಕಿ ಚಿನ್ಮಯಿ ಹೇಳಿದ್ದಾರೆ. ‘ವೈರಮುತ್ತು ವಿರುದ್ಧ ಆರೋಪ ಮಾಡಿದ್ದ ಮಹಿಳೆಯರ ಧ್ವನಿಯನ್ನು ಅಡಗಿಸಲಾಗಿದೆ. ಅದಕ್ಕೆ ಅವರು ಭಾರಿ ಬೆಲೆ ತೆರಬೇಕಾಯಿತು. ತಮ್ಮ ಕನಸುಗಳನ್ನು ತ್ಯಜಿಸಿದ ಉಳಿದ ಮಹಿಳೆಯರು ನನ್ನಷ್ಟು ಅದೃಷ್ಟವಂತರಾಗಿರಲಿಲ್ಲ’ ಎಂದು ತಿಳಿಸಿದ್ದಾರೆ.


