ಅಹಮದಾಬಾದ್: ಕ್ರಿಕೆಟ್ ಲೋಕದ ‘ಜಂಟಲ್ಮನ್’ ತಂಡಗಳೆಂದೇ ಹೆಸರಾದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೈ-ವೋಲ್ಟೇಜ್ ಡ್ರಾಮಾಗೆ ಸಾಕ್ಷಿಯಾಯಿತು.
ಒಂದೆಡೆ ಭಾರತ ಭರ್ಜರಿ ಜಯ ಸಾಧಿಸಿ ಇತಿಹಾಸ ಬರೆದರೆ, ಮತ್ತೊಂದೆಡೆ ಅರ್ಶ್ದೀಪ್ ಸಿಂಗ್ ಮತ್ತು ಡೇರಿಲ್ ಮಿಚೆಲ್ ನಡುವಿನ ಘಟನೆ ಗಮನ ಸೆಳೆಯಿತು. ನಂತರ ಅಂಪೈರ್ಗಳು ಮತ್ತು ಭಾರತದ ನಾಯಕ ಸೂರ್ಯಕುಮಾರ ಯಾದವ್ ಪರಿಸ್ಥಿತಿಯನ್ನು ಶಾಂತಗೊಳಿಸಲು ಮಧ್ಯಪ್ರವೇಶಿಸಬೇಕಾಯಿತು.
ಭಾರತ ನೀಡಿದ 255 ರನ್ಗಳ ಗುರಿ ಬೆನ್ನತ್ತಿ ನ್ಯೂಜಿಲೆಂಡ್ ತಂಡ ಬ್ಯಾಟ್ ಮಾಡುತ್ತಿದ್ದಾಗ ಇನಿಂಗ್ಸ್ನ 11ನೇ ಓವರ್ನಲ್ಲಿ ಈ ಘಟನೆ ನಡೆಯಿತು. ಅರ್ಶದೀಪ ಸಿಂಗ್ ಎಸೆದ ಓವರ್ನ ಮೊದಲ ಎರಡು ಎಸೆತಗಳಲ್ಲಿ ಡೇರಿಲ್ ಮಿಚೆಲ್ ಸತತ ಎರಡು ಸಿಕ್ಸರ್ಗಳನ್ನು ಸಿಡಿಸಿದ್ದರು. ಇದರಿಂದ ಅಸಮಾಧಾನಗೊಂಡ ಅರ್ಶದೀಪ, ಚೆಂಡನ್ನು ಫೀಲ್ಡ್ ಮಾಡಿದ ನಂತರ ಅನಗತ್ಯವಾಗಿ ಬ್ಯಾಟರ್ ಮಿಚೆಲ್ ಕಡೆಗೆ ಎಸೆದರು. ಚೆಂಡು ನೇರವಾಗಿ ಮಿಚೆಲ್ ಅವರ ಕಾಲಿಗೆ ಬಡಿಯಿತು.
ಸಾಮಾನ್ಯವಾಗಿ ಶಾಂತಸ್ವಭಾವದ ಮಿಚೆಲ್ ಇದರಿಂದ ಆಕ್ರೋಶಗೊಂಡರು. ಅರ್ಶದೀಪ ಕ್ಷಮೆಯಾಚಿಸಲಿಲ್ಲ. ಆದರೆ ಕೂಡಲೇ ಮಧ್ಯಪ್ರವೇಶಿಸಿದ ಭಾರತ ತಂಡದ ನಾಯಕ ಸೂರ್ಯಕುಮಾರ ಯಾದವ್, ಮಿಚೆಲ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅವರು ಮಿಚೆಲ್ ಅವರೊಂದಿಗೆ ಮಾತನಾಡಿದರು ಮತ್ತು ಬಹುಶಃ ಅರ್ಶದೀಪ ಪರವಾಗಿ ಕ್ಷಮೆಯಾಚಿಸಿದರು. ಅಂಪೈರ್ ರಿಚರ್ಡ್ ಇಲ್ಲಿಂಗ್ವರ್ತ್ ಕೂಡ ಅರ್ಶ್ದೀಪ ಅವರಿಗೆ ಎಚ್ಚರಿಕೆ ನೀಡಿದರು. ಚೆಂಡಿನಿಂದ ಬ್ಯಾಟರ್ಗೆ ಹೊಡೆದಿದ್ದಕ್ಕಾಗಿ ಅರ್ಶದೀಪ ಅವರಿಗೆ ದಂಡ ವಿಧಿಸುವ ಸಾಧ್ಯತೆಯಿದೆ. ಅಂತಿಮವಾಗಿ ಓವರ್ ಮುಕ್ತಾಯದ ನಂತರ ಇಬ್ಬರೂ ಪರಸ್ಪರ ತಬ್ಬಿಕೊಳ್ಳುವ ಮೂಲಕ ಜಗಳಕ್ಕೆ ತೆರೆ ಎಳೆದರು.
ಭಾರತಕ್ಕೆ ಐತಿಹಾಸಿಕ ಜಯ – ದಾಖಲೆಗಳ ಸುರಿಮಳೆ
ಪಂದ್ಯದ ಫಲಿತಾಂಶದ ವಿಷಯಕ್ಕೆ ಬಂದರೆ, ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಬೃಹತ್ ಅಂತರದ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದೆ:
ಭಾರತವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದು, ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಅಲ್ಲದೆ, ಟಿ20 ವಿಶ್ವಕಪ್ ಗೆದ್ದ ಮೊದಲ ಆತಿಥೇಯ ರಾಷ್ಟ್ರ ಎಂಬ ದಾಖಲೆಯೂ ಭಾರತದ ಪಾಲಾಯಿತು.
ಕಿವೀಸ್ ವಿರುದ್ಧ ಮೊದಲ ಜಯ: ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ, ಅದು ಕೂಡ ಫೈನಲ್ನಂತಹ ಮಹತ್ವದ ಪಂದ್ಯದಲ್ಲಿ ಎಂಬುದು ವಿಶೇಷ.


