ಅಹಮದಾಬಾದ್: ಹಾಲಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನಿಂದ ಸುಮಾರು ₹27.48 ಕೋಟಿ ಬಹುಮಾನವನ್ನು ಜೇಬಿಗಿಳಿಸಲಿದೆ. ಕಳೆದ ಆವೃತ್ತಿಗಿಂತ ಈ ಬಾರಿ ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿದೆ.
ರನ್ನರ್ ಅಪ್ ತಂಡವು ₹14.65 ಕೋಟಿ, ಸೆಮಿ ಫೈನಲ್ನಲ್ಲಿ ಸೋತ ತಂಡಗಳು ತಲಾ ₹7.24 ಕೋಟಿ ಪಡೆಯಲಿವೆ. ಟೂರ್ನಿಯು ಒಟ್ಟು ₹120.37 ಕೋಟಿ ಬಹುಮಾನ ಮೊತ್ತ ಒಳಗೊಂಡಿದೆ.
ಈ ಸಲದ ಟಿ20 ವಿಶ್ವಕಪ್ ಟೂರ್ನಿಯುದ್ದಕ್ಕೂ ಭಾರತ ತಂಡವು ಒಂದು ‘ಪರಿಪೂರ್ಣ ಪಂದ್ಯ’ದ ಶೋಧದಲ್ಲಿತ್ತು. ಏಳು,ಬೀಳುಗಳ ಹಾದಿಯಲ್ಲಿ ಸಾಗಿ ಫೈನಲ್ ಪ್ರವೇಶಿಸಿರುವ ಸೂರ್ಯಕುಮಾರ್ ಯಾದವ್ ಬಳಗವು ‘ಸುಖಾಂತ್ಯ’ದ ಮೇಲೆ ಕಣ್ಣಿಟ್ಟಿದೆ.
ಸಾಬರಮತಿ ನದಿ ತಟದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ‘ಹಾಲಿ ಚಾಂಪಿಯನ್’ ಭಾರತ ತಂಡವು ನ್ಯೂಜಿಲೆಂಡ್ ಎದುರು ಕಣಕ್ಕಿಳಿಯಲಿದೆ. ಎರಡೂವರೆ ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡದ ಕನಸು ಭಗ್ನವಾಗಿತ್ತು. ಆ ಕಹಿಯನ್ನು ಮರೆಸಿ ಗೆಲುವಿನ ದಾಖಲೆ ಬರೆಯುವ ತವಕದಲ್ಲಿ ಭಾರತ ತಂಡ ಇದೆ.
ಸುಮಾರು ಒಂದು ತಿಂಗಳ ಅವಧಿಯಲ್ಲಿ ತಂಡಗಳು ವಿಭಿನ್ನ ತಾಣಗಳು ಹಾಗೂ ಹವಾಮಾನಗಳಲ್ಲಿ ಆಡಿ ಈ ಹಂತಕ್ಕೆ ಬಂದಿವೆ. ಪ್ರಯಾಣವನ್ನು ಯಾವ ರೀತಿ ಆರಂಭಿಸಲಾಯಿತು ಎಂಬುದಕ್ಕಿಂತಲೂ ಮುಕ್ತಾಯವನ್ನು ಯಾವ ರೀತಿ ಮಾಡಲಾಗುತ್ತದೆ ಎಂಬುದು ಮುಖ್ಯವಾಗು ತ್ತದೆ. ಆದ್ದರಿಂದ ಈ ಪಂದ್ಯದಲ್ಲಿ ಸಣ್ಣ ತಪ್ಪುಗಳನ್ನೆಸಗಿದರೂ ತುಟ್ಟಿಯಾಗಬಹುದು.
ಎರಡು ಸಲದ ಚಾಂಪಿಯನ್ ಭಾರತ ತಂಡವು ಇದೇ ಮೈದಾನದಲ್ಲಿ ಈಚೆಗೆ ನಡೆದಿದ್ದ ಪ್ರಸಕ್ತ ಟೂರ್ನಿಯ ಸೂಪರ್ 8ರ ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋತಿತ್ತು. ನಂತರದ ಎರಡು ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ರೀತಿ ಅನನ್ಯವಾಗಿತ್ತು. ಬ್ಯಾಟಿಂಗ್ನಲ್ಲಿ ಉತ್ತಮ ಲಯದಲ್ಲಿರುವ ಭಾರತವು ಕಿವೀಸ್ ಬಳಗದ ಮುಂದೆ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾದಾಗಲೂ ಕಿವೀಸ್ ಜಯ ಗಳಿಸಿದೆ. ಆದ್ದರಿಂದ ಆ ಸೋಲಿನ ಸರಪಣಿಯನ್ನು ತುಂಡರಿಸಿ ಗೆಲುವಿನ ಸಂಭ್ರಮ ಆಚರಿಸುವ ಛಲವೂ ಸೂರ್ಯ ಪಡೆಗೆ ಇದೆ.
ಭಾರತಕ್ಕೆ ಈಗ ಎರಡು ದಾಖಲೆ ಬರೆಯುವ ಅವಕಾಶ ಇದೆ. ಸತತ ಎರಡನೇ ಟ್ರೋಫಿ ಮತ್ತು ತವರಿನಂಗಳದಲ್ಲಿ ಗೆದ್ದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗುಲಿದೆ. ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸೇರುವ ಈ ಕ್ರೀಡಾಂಗಣ ದಲ್ಲಿ ಅಂತಹ ದಾಖಲೆಯಾಗುವುದು ವಿಶಿಷ್ಟ ಸಾಧನೆಯೂ ಆಗುತ್ತದೆ.
ಸಂಜು ಸ್ಯಾಮ್ಸನ್ ಸೂಪರ್ ಎಂಟರ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಮತ್ತು ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಎದುರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅವರು ಲಯಕ್ಕೆ ಮರಳಿರುವುದು ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಸಿದೆ. ಇಶಾನ್ ಕಿಶನ್ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಸೂರ್ಯಕುಮಾರ್ ಯಾದವ್ ಕೂಡ ತಮ್ಮ ಬ್ಯಾಟಿಂಗ್ ಮಾಡಿದ್ದಾರೆ. ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ತಂಡಕ್ಕೆ ಅಗತ್ಯವಿದ್ದಾಗ ಆಲ್ರೌಂಡ್ ಆಟದ ಮೂಲಕ ನೆರವು ನೀಡಿದ್ದಾರೆ. ತಿಲಕ್ ವರ್ಮಾ ಕ್ರಮಾಂಕ ಬದಲಾದ ನಂತರ ಲಯ ಕಂಡುಕೊಂಡಿದ್ದಾರೆ. ಆದರೆ ಅಭಿಷೇಕ್ ಶರ್ಮಾ ಅವರ ವೈಫಲ್ಯ ಮಾತ್ರ ಮುಂದುವರಿ ದಿರುವುದು ತಂಡದ ಚಿಂತೆ. ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾಗೆ ಫೈನಲ್ನಲ್ಲಿ ಲಯಕ್ಕೆ ಮರಳುವ ಮತ್ತೊಂದು ಅವಕಾಶ ಸಿಗಬಹುದು.
ಬೌಲಿಂಗ್ ವಿಭಾಗದಲ್ಲಿಯೂ ಭಾರತಕ್ಕೆ ಇರುವ ಪ್ರಮುಖ ಚಿಂತೆಯೆಂದರೆ ಸ್ಪಿನ್ನರ್ ವರುಣ್ ಚಕ್ರವರ್ತಿ. ಅವರು ಹೆಚ್ಚು ರನ್ ಕೊಡುತ್ತಿದ್ದಾರೆ. ಆದರೆ ವೇಗಿ ಜಸ್ಪ್ರೀತ್ ಬೂಮ್ರಾ ಅವರಂತಹ ದಿಗ್ಗಜ ವೇಗಿ ಈಗಾಗಲೇ ತಂಡಕ್ಕೆ ಹಲವು ಬಾರಿ ಗೆಲುವಿನತ್ತ ಮುನ್ನಡೆಸಿ ದ್ದಾರೆ. ನ್ಯೂಜಿಲೆಂಡ್ ಎದುರೂ ಅವರು ಪರಿಣಾಮಕಾರಿಯಾಗುವ ನಿರೀಕ್ಷೆ ಇದೆ.
ಆದರೆ ‘ಬ್ಲ್ಯಾಕ್ ಕ್ಯಾಪ್ಸ್’ ಬಳಗವನ್ನು ಯಾವುದೇ ಹಂತ ದಲ್ಲಿಯೂ ಹಗುರವಾಗಿ ಪರಿಗಣಿಸುವಂತಿಲ್ಲ. ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾದ ಎದುರು ಗೆದ್ದ ರೀತಿಯೇ ಅದಕ್ಕೆ ಸಾಕ್ಷಿ. ಫಿನ್ ಅಲೆನ್ 33 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆರಂಭಿಕ ಬ್ಯಾಟರ್ ಟಿಮ್ ಸೀಫರ್ಟ್, ಮಧ್ಯಮ ಕ್ರಮಾಂಕದಲ್ಲಿ ರಚಿನ್ ರವೀಂದ್ರ ಮತ್ತು ಗ್ಲೆನ್ ಫಿಲಿಪ್ಸ್ ಅವರು ಅಮೋಘವಾದ ಲಯದಲ್ಲಿದ್ದಾರೆ. ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್ ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ ಅವರು ಪಂದ್ಯದ ಫಲಿತಾಂಶವನ್ನು ತಮ್ಮ ತಂಡದತ್ತ ವಾಲಿಸುವಂತಹ ಇನಿಂಗ್ಸ್ ಗಳನ್ನು ಈ ಹಿಂದೆ ಆಡಿದ್ದಾರೆ.
ಆಫ್ಸ್ಪಿನ್ ಜೋಡಿ ಫಿಲಿಪ್ಸ್ ಮತ್ತು ಕೊಲಿ ಮೆಕ್ಕಾಂಚಿ ಅವರು ಭಾರತದ ಎಡಗೈ ಬ್ಯಾಟರ್ಗಳನ್ನು ಕಟ್ಟಿಹಾಕಬಲ್ಲ ಸಮರ್ಥರು. ಇನ್ನೊಂದೆಡೆ ಸ್ಯಾಂಟನರ್ ಮತ್ತು ರಚಿನ್ ಅವರೂ ಸ್ಪಿನ್ ಮೋಡಿ ಮೆರೆಯಬಲ್ಲರು. ಸೂಪರ್ 8ರ ಹಂತದಲ್ಲಿ ಕಿವೀಸ್ ಬಳಗವು ಕೇವಲ ಒಂದು ಪಂದ್ಯ ಗೆದ್ದಿತ್ತು. ಇನ್ನೊಂದು ಪಂದ್ಯ ಮಳೆಗೆ ಆಹುತಿಯಾಗಿ ಒಂದು ಅಂಕ ಗಳಿಸಿತ್ತು. ಸೆಮಿಫೈನಲ್ ಪ್ರವೇಶಿಸಿತ್ತು. ವೈಟ್ ಬಾಲ್ ಕ್ರಿಕೆಟ್ನಲ್ಲಿ ಕಿವೀಸ್ಗಿಂತಲೂ ಭಾರತವೇ ಹೆಚ್ಚು ಬಲಾಢ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ತಕ್ಕಂತೆ ಸವಾಲೊಡ್ಡಲು ಸ್ಯಾಂಟನರ್ ಬಳಗ ತಂತ್ರಗಾರಿಕೆ ಹೆಣೆಯುತ್ತಿದೆ.
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬೂಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ರಿಂಕು ಸಿಂಗ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.
ನ್ಯೂಜಿಲೆಂಡ್: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಟಿಮ್ ಸೀಫರ್ಟ್, ರಚಿನ್ ರವೀಂದ್ರ, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್, ಕೊಲಿ ಮೆಕ್ಕಾಂಚಿ, ಕೈಲ್ ಜೇಮಿಸನ್, ಜೇಕಬ್ ಡಫಿ, ಡೆವೊನ್ ಕಾನ್ವೆ, ಜಿಮ್ಮಿ ನೀಶಮ್, ಈಶ್ ಸೋಧಿ


