ನವದೆಹಲಿ :ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಜಾಗತಿಕ ವ್ಯಾಪಾರ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.
ಸ್ನೇಹ-ವ್ಯಾಪಾರ ಎರಡನ್ನೂ ವ್ಯವಹಾರಿಕವಾಗಿಯೇ ನೋಡುತ್ತಿರುವ ಟ್ರಂಪ್, ಮಿತ್ರ ರಾಷ್ಟ್ರಗಳನ್ನೂ ಬಿಡದೆ ಭಾರಿ ಪ್ರಮಾಣದ ಆಮದು ಸುಂಕ ವಿಧಿಸುತ್ತಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಭಾರತದ ಮೇಲೂ ಅತಿಹೆಚ್ಚು ಅಂದರೆ ಶೇ. 50ರಷ್ಟು ಸುಂಕ ವಿಧಿಸಿದ್ದಾರೆ.
ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 2025ರಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಪ್ರಮಾಣವು ಶೇ. 1.83ರಷ್ಟು ಕುಸಿದಿದ್ದು, 6.88 ಬಿಲಿಯನ್ ಡಾಲರ್ (ಸುಮಾರು ₹63,300 ಕೋಟಿ) ಗೆ ತಲುಪಿದೆ. ಟ್ರಂಪ್ ಅವರ ಸುಂಕದ ಬಿಸಿ ಭಾರತದ ಆರ್ಥಿಕತೆಯ ಮೇಲೆ ಸ್ವಲ್ಪಮಟ್ಟಿಗೆ ಪ್ರಭಾವ ಬೀರುತ್ತಿರುವುದು ಸ್ಪಷ್ಟವಾಗುತ್ತಿದೆ.
ಆದರೆ ಟ್ರಂಪ್ ಶೀಘ್ರದಲ್ಲೇ ಸುಂಕಗಳನ್ನು ಕಡಿಮೆ ಮಾಡದಿದ್ದರೆ ಅಮೆರಿಕದ ಸರಕುಗಳ ಮೇಲೆ ಭಾರತವೂ ಪ್ರತಿ ಸುಂಕಗಳನ್ನು ವಿಧಿಸಬೇಕೆಂದು ಬಹುಪಾಲು ಭಾರತೀಯರು ಒತ್ತಾಯಿಸಿದ್ದಾರೆ ಎಂದು ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯ ಪ್ರಕಾರ, ಅಮೆರಿಕದ ಈ ಏಕಪಕ್ಷೀಯ ನಿರ್ಧಾರಕ್ಕೆ ಭಾರತೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೆರಿಕ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ, ಭಾರತವೂ ಸಹ ಅಮೆರಿಕದ ಉತ್ಪನ್ನಗಳ ಮೇಲೆ ಅಷ್ಟೇ ಪ್ರಮಾಣದ ಸುಂಕ ವಿಧಿಸಬೇಕು ಎಂದು ಶೇ. 45ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ನವೆಂಬರ್ನಲ್ಲಿ ಅಮೆರಿಕದ ಧಾನ್ಯಗಳ (Pulses) ಮೇಲೆ ಭಾರತ ಶೇ. 30ರಷ್ಟು ಸುಂಕ ವಿಧಿಸಿತ್ತು. ಇದು ಯಾವುದೇ ಅಬ್ಬರವಿಲ್ಲದೆ ಅಮೆರಿಕದ ಮಾರುಕಟ್ಟೆಗೆ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ.
ಟ್ರಂಪ್ 2.0 ಆಡಳಿತದಲ್ಲಿ ಭಾರತ-ಅಮೆರಿಕ ಸಂಬಂಧ ಹದಗೆಟ್ಟಿದೆ ಎಂದು ಶೇ. 54ರಷ್ಟು ಜನರು ನಂಬಿದ್ದಾರೆ. ಕೇವಲ ಶೇ. 21ರಷ್ಟು ಮಂದಿ ಮಾತ್ರ ಸಂಬಂಧ ಸುಧಾರಿಸಿದೆ ಎಂದಿದ್ದಾರೆ.
ಅಮೆರಿಕದ ಕಠಿಣ ನಿಲುವುಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ವಾಕ್ಸಮರಕ್ಕೆ ಇಳಿಯದೆ ಪ್ರೌಢಿಮೆ ಮೆರೆದಿದ್ದಾರೆ. ಅಮೆರಿಕದ ಮೇಲಿನ ಅವಲಂಬನೆ ತಗ್ಗಿಸಲು ಭಾರತವು ಇತರೆ ರಾಷ್ಟ್ರಗಳೊಂದಿಗೆ ಕೈಜೋಡಿಸುತ್ತಿದೆ ಎಂದು ಹೆಚ್ಚಿನ ಜನರು ಹೇಳಿದ್ದಾರೆ.
ಜಿಎಸ್ಟಿ ಕಡಿತಕ್ಕೆ ಆಗ್ರಹ: ಸಮೀಕ್ಷೆಯಲ್ಲಿ ಶೇ. 34ರಷ್ಟು ಜನ ಜಿಎಸ್ಟಿ ದರಗಳನ್ನು ಇನ್ನಷ್ಟು ಕಡಿತಗೊಳಿಸುವ ಮೂಲಕ ಮಧ್ಯಮ ವರ್ಗದ ಕೈಗೆ ಹೆಚ್ಚಿನ ಹಣ ಸಿಗುವಂತೆ ಮಾಡಬೇಕು ಎಂದು ಬಯಸಿದ್ದಾರೆ.


