
ಬೆಳಗಾವಿ : ಪ್ರಸ್ತುತ ಯಾಂತ್ರಿಕ ಜೀವನದಲ್ಲಿ ಶಾಸ್ತ್ರೀಯ ಸಂಗೀತದಂತಹ ಕಲೆಯನ್ನು ರೂಢಿಸಿಕೊಂಡು ಇಂತಹ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ಹಾಡುವವರಿಗೂ ಕೇಳುವವರಿಗೂ ಮನಸ್ಸು ಹಗುರವಾಗಿ ಬದುಕಿನಲ್ಲಿ ಚೈತನ್ಯ ಮೂಡುತ್ತದೆ ಎಂದು ಕಲಾಶ್ರೀ ಪ್ರಶಸ್ತಿ ವಿಜೇತೆ ವಿದುಷಿ ಶಾಂತಲಕ್ಷ್ಮಿ ನಾಗೇಂದ್ರನಾಥ ಹೇಳಿದರು.
ಇಲ್ಲಿನ ವರೆರ್ಕರ್ ಭವನದಲ್ಲಿ ಪದ್ಮ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 179 ನೇ ತ್ಯಾಗರಾಜರ ಆರಾಧನೆ ಹಾಗೂ 462ನೇ ಪುರಂದರ ದಾಸರ ಆರಾಧನೆಯನ್ನು, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಗೀತ ವಿದ್ವಾನ್ ಎಂ.ಜಿ. ರಾವ್ ಅವರು ಕಾರ್ಯಕ್ರಮಕ್ಕೆ ಘಟಂ ನುಡಿಸುವುದರ ಜೊತೆಗೆ, ಮಾತನಾಡಿ, ಹೆಚ್ಚು ಹೆಚ್ಚು ಜನ ಇಂತಹ ಸಂಗೀತ ಕಾರ್ಯಕ್ರಮಗಳಿಗೆ ಆಗಮಿಸಿ ಬೆಂಬಲಿಸುವ ಮೂಲಕ ಕಲಾಕಾರರಿಗೆ ಪ್ರೋತ್ಸಾಹ ದೊರಕುತ್ತದೆ ಎಂದು ಹೇಳಿದರು.
ಗಾನಸುಧಾ ಶಾಲೆಯ ವಿದ್ಯಾರ್ಥಿಗಳು, ಪುರಂದರ ದಾಸರ ಕೃತಿಗಳು ಹಾಗೂ ಪಂಚರತ್ನ ಕೀರ್ತನೆಗಳೊಳಗೊಂಡ ತ್ಯಾಗರಾಜರ ಕೃತಿಗಳನ್ನು ಹಾಡಿ ನೆರೆದಿದ್ದ ಜನಸ್ತೋಮಕ್ಕೆ ಸಂಗೀತ ರಸದೌತಣ ಉಣಬಡಿಸಿದರು.
ಗಾನ ಮಂದಿರದ ವಿದ್ಯಾರ್ಥಿಗಳು ಹಾಗೂ ಜಿತೇಂದ್ರ ಸಾಬಣ್ಣವರ್ ಅವರು ಕ್ರಮವಾಗಿ ವೈಯಲಿನ್ ಹಾಗೂ ತಬಲಾ ಸಾತ್ ನೀಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಶೋಭೆ ತಂದರು.
ಡಾ|ಎಂ. ಎನ್. ಸತ್ಯನಾರಾಯಣ್, ವಿದುಷಿ ಭಾರತಿ ಭಟ್, ಡಾ|ಸಂಪ್ರೀತಾ ಸತ್ಯನಾರಾಯಣ್, ವಿದುಷಿ ಸಂಯುಕ್ತ ಸತ್ಯನಾರಾಯಣ, ವಿದ್ವಾನ್ ರವೀಂದ್ರ ಶರ್ಮ ಹಾಗೂ ವಿದೂಷಿ ಪ್ರೇಮ ಉಪಾಧ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮ ದ ನಂತರ ಪ್ರಶಾಂತ್ ಅವರು ಪ್ರಸಾದ ಪ್ರಾಯೋಜಿಸಿ ವಿನಿಯೋಗಿಸಿದರು.
ಶ್ರೀಮತಿ ಸಂಗೀತಾ ಭಟ್ ಹಾಗೂ ಶ್ರೀಮತಿ ವೀಣಾ ಪ್ರಸನ್ನ ನಿರೂಪಿಸಿದರು.


