ಬೆಳಗಾವಿ: ಬೆಳಗಾವಿ ಮಹಾನಗರಕ್ಕೆ ಹೊಂದಿಕೊಂಡಿರುವ ಕುವೆಂಪು ನಗರದ ಪ್ರೆಸ್ ಕಾಲನಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇದರಿಂದ ಪ್ರತಿದಿನ ವಾಹನ ಸಂಚಾರ ಮಾಡುವವರು ತೀವ್ರ ತೊಂದರೆ ಅನುಭವಿಸುವಂತಹಾಗಿದೆ.
ಈ ಪ್ರದೇಶದಲ್ಲಿ ಅತ್ಯಂತ ಪ್ರತಿಷ್ಠಿತ ನಾಗರಿಕರು ವಾಸವಾಗಿದ್ದಾರೆ. ಅದರಲ್ಲಿಯೂ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಸತೀಶ ಜಾರಕಿಹೊಳಿ ಅವರ ಮನೆ ಇದೇ ವ್ಯಾಪ್ತಿಯಲ್ಲಿ ಬರುತ್ತದೆ. ಆದರೂ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕಾಣದಂತೆ ಈ ರಸ್ತೆಯ ಅಭಿವೃದ್ಧಿಗೆ ಮುಂದಾಗದೆ ಇರುವುದು ಸೋಜಿಗವೇ ಸರಿ. ಎಕಸ್ ತಿರುಪತಿ ಸಂಸ್ಥೆಯ ಬಸ್ಸುಗಳ ಓಡಾಟದಿಂದಾಗಿಯೆ ಈ ರಸ್ತೆ ಪ್ರಮುಖ ಕಾರಣವಾಗಿದೆ.
ಈ ಬಸ್ಸುಗಳ ಓಡಾಟದಿಂದಾಗಿಯೇ ಸಾಮಾನ್ಯ ನಾಗರಿಕರು ದೈನಂದಿನ ಸಂಚಾರಕ್ಕೆ ಪ್ರಯಾಸ ಪಡುವ ಸ್ಥಿತಿ ಸೃಷ್ಟಿಯಾಗಿದೆ.
ದ್ವಿಚಕ್ರ ವಾಹನ ಸವಾರರ ತೊಂದರೆ ಹೇಳತೀರದಾಗಿದೆ. ಪ್ರತಿದಿನ ದ್ವಿಚಕ್ರ ವಾಹನ ಸವಾರರು ಇನ್ನಿಲ್ಲದಂತೆ ತೊಂದರೆ ಅನುಭವಿಸುತ್ತಾರೆ. ಈ ಭಾಗದಲ್ಲಿ ವಾಸವಾಗಿರುವ ಸವಾರರ ದ್ವಿಚಕ್ರ ವಾಹನ ಪ್ರತಿದಿನ ಕೆಟ್ಟು ಹೋಗುತ್ತದೆ. ಹೀಗಾಗಿ ಅವರು ಆಡಳಿತಕ್ಕೆ ದಿನವೂ ಶಾಪ ಹಾಕುವಂತಾಗಿದೆ.
ರಸ್ತೆಯನ್ನು ಬೆಳಗಾವಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರ(ಬುಡಾ) ದುರಸ್ತಿ ಮಾಡಬೇಕು. ಆದರೆ ಅವರು ದುರಸ್ತಿಗೆ ಮುಂದಾಗದೆ ಎಂದಿನಂತೆ ತಮ್ಮ ಬೇಜವಾಬ್ದಾರಿತನದ ನಿಲುವು ಮುಂದುವರಿಸುತ್ತಿದ್ದಾರೆ.
ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ ಒಬ್ಬರು ಮೇಲೊಬ್ಬರ ಮೇಲೆ ಹಾಕುತ್ತಾರೆ ವಿನಾಂ ರಸ್ತೆಯನ್ನು ಅಭಿವೃದ್ಧಿ ಮಾಡಲು ಮುಂದಾಗುತ್ತಿಲ್ಲ.
ಇಲ್ಲಿಯ ನಾಗರಿಕರು ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿಯೇ ರಸ್ತೆ ಅಭಿವೃದ್ಧಿಪಡಿಸುವಂತೆ ಆಡಳಿತದ ಮೇಲೆ ಒತ್ತಡ ಹೇರಿದ್ದರು. ಆದರೆ ನಗರಾಭಿವೃದ್ಧಿ ಪ್ರಾಧಿಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಂತಿದೆ. ರಸ್ತೆಯ ದುರಾವಸ್ಥೆಯಿಂದಾಗಿ ಅನೇಕ ವಾಹನ ಸವಾರರು ಬಿದ್ದು ಆಸ್ಪತ್ರೆ ಸೇರಿದರೂ ಆಡಳಿತಕ್ಕೆ ಇದುವರೆಗೂ ಜ್ಞಾನೋದಯ ಆಗಿಲ್ಲ.
ರಸ್ತೆ ಅಭಿವೃದ್ಧಿಗೆ ಹಸಿರು ನಿಶಾನೆ ಸಿಕ್ಕಿದೆ ಎಂಬ ಭರವಸೆ ಸಿಕ್ಕಿದೆ. ಆದರೆ ಇದಕ್ಕೂ ಸ್ಪಷ್ಟ ಉತ್ತರ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಈ ಕೂಡಲೇ ಆಡಳಿತ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ಹಾದಿ ತುಳಿಯುವುದಾಗಿ ನಾಗರಿಕರು ಎಚ್ಚರಿಕೆ ರವಾನಿಸಿದ್ದಾರೆ.
ಅಭಿವೃದ್ಧಿ ಇಲ್ಲಿ ಮಾತ್ರ ಶೂನ್ಯವೇ ಶೂನ್ಯ…
ವಿವಿಧ ಪತ್ರಿಕೆಗಳ ಸಂಪಾದಕರು ಹಾಗೂ ಕನ್ನಡ ಹೋರಾಟಗಾರರು ಬಗ್ಗೆ ಅನೇಕ ಬಾರಿ ಗಮನ ಸೆಳೆದರೂ ಕೂಡ ಆಡಳಿತ ಕಿವಿ ಮುಚ್ಚಿಕೊಂಡಿದೆ.
ಪತ್ರಕರ್ತರ ಕಾಲೋನಿಯ ಎದುರುಗಡೆ ಇರುವ ಅದರಲ್ಲೂ ಉದ್ಯಾನವನದ ಮುಂದೆ ಇರುವ ಈ ಜಾಗದಲ್ಲಿ ಪಾಲಿಕೆ ತನ್ನ ಕಚಡ ತುಂಬಿದ ಸಣ್ಣ ಸಣ್ಣ ವಾಹನಗಳಿಂದ ದೊಡ್ಡ ವಾಹನಕ್ಕೆ ಡಂಪ್ ಮಾಡುವ ಸ್ಥಳವಾಗಿ ನಿರ್ಮಾಣವಾಗಿದೆ. ಉದ್ಯಾನವನದಲ್ಲಿ ಆಟವಾಡುವ ಮಕ್ಕಳು, ವಾಯು ವಿಹಾರ ಮಾಡುವ ಹಿರಿಯರು, ಮಹಿಳೆಯರು ಪಾಲಿಕೆಯ ವರ್ತನೆಗೆ ಬೇಸತ್ತು ಮೂಗು ಮುಚ್ಚಿಕೊಂಡು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ಕಸ ಮುಕ್ತ ಮಾಡಬೇಕಾದ ಪಾಲಿಕೆ ಸಿಕ್ಕ ಸಿಕ್ಕ ಸುಂದರ ಜಾಗಗಳನ್ನೆಲ್ಲ ತನ್ನ ಕಸ ತುಂಬುವ ತಾಣಗಳನ್ನಾಗಿ ಮಾಡಿಕೊಂಡು ಅಲ್ಲಿಯ ಕಸ ಬಿಟ್ಟು ಹೋಗುವ ನೋಟ ಕಂಡುಬರುತ್ತದೆ. ಇಲ್ಲಿನ ನಿವಾಸಿಗಳ ಆರೋಗ್ಯದ ಮೇಲೂ ಪರಿಣಾಮ ಉಂಟಾಗಿದೆ. ಇಲ್ಲಿ ಇರುವ ಚರ್ಚ್ ಗೆ ಬರುವವರು ಸಹ ಮೂಗು ಮುಚ್ಚಿಕೊಂಡು ಓಡುವ ಪರಿಸ್ಥಿತಿ ಉಂಟಾಗಿದೆ. ಗಟಾರು ನಿರ್ವಹಣೆಗಳ ಕೂಡ ಪಾಲಿಕೆ ಮಾಡುತ್ತಿಲ್ಲ. ನೂತನವಾಗಿ ಆಗಮಿಸಿರುವ
ಮಹಾನಗರ ಪಾಲಿಕೆ ಕಮಿಷನರ್ರು ಅಲ್ಪ ಸ್ಪಂದಿಸಿದರೆ, ಅವರ ಪಿಎ ಬರಿಯ ಲೊಕೇಶನ್ ಕಳಿಸಿ ಎಂಬ ಹೇಳಿಕೆಗೆ ಸೀಮಿತಗೊಂಡಿದ್ದಾರೆ. ಅಭಿವೃದ್ಧಿ ಇಲ್ಲಿ ಮಾತ್ರ ಶೂನ್ಯವೇ ಶೂನ್ಯ.


