ಬೆಳಗಾವಿ : ಇಡೀ ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆ ನಡೆದಿದೆ. ಪೊಲೀಸರು ಈ ಸಂಬಂಧ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಸುಮಾರು 400 ಕೋಟಿ ರೂ. ಮೌಲ್ಯದ 2 ಸಾವಿರ ಮುಖಬೆಲೆಯ ನೋಟುಗಳ ಸಾಗಣೆ ಹಾಗೂ ವ್ಯಕ್ತಿಯ ಅಪಹರಣ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಈವರೆಗೆ ಆರು ಜನರನ್ನು ಬಂಧಿಸಿದೆ.
ಜಯೇಶ್ ಕದಂ, ವಿಶಾಲ್ ನಾಯ್ಡು, ಸುನಿಲ್ ಧುಮಾಲ್, ವಿರಾಟ್ ಗಾಂಧಿ, ಜನಾರ್ದನ್ ದೈಗುಡೆ ಮತ್ತು ಸಯ್ಯದ್ ಅಜರ್ ಬಂಧಿತರಾಗಿದ್ದಾರೆ.
ರೂ.2 ಸಾವಿರ ಮುಖಬೆಲೆಯ ನೋಟುಗಳನ್ನು 2023ರ ಮೇ ತಿಂಗಳಿನಲ್ಲಿ ಚಲಾವಣೆಯಿಂದ ಹಿಂಪಡೆಯಲಾಗಿತ್ತು. ಆದರೂ, ಅವು ಕಾನೂನುಬದ್ಧ ಚಲಾವಣೆಯ ಸ್ಥಾನಮಾನ ಹೊಂದಿವೆ. ಈ ನೋಟುಗಳನ್ನು ದರೋಡೆ ಮಾಡಲು ಯತ್ನಿಸಲಾಗಿತ್ತು.
ಮಹಾರಾಷ್ಟ್ರ–ಕರ್ನಾಟಕ ಗಡಿಯ ಬೆಳಗಾವಿ ಜಿಲ್ಲೆಯ ಖಾನಾಪುರ ವ್ಯಾಪ್ತಿಯ ಅರಣ್ಯ ಮತ್ತು ಅಪಘಾತ ವಲಯವಾದ ಚೋರ್ಲಾ ಘಾಟ್ ಪ್ರದೇಶದಲ್ಲಿ ಅಪಾರ ಪ್ರಮಾಣದ ಹಣವನ್ನು ಸಾಗಿಸುತ್ತಿದ್ದ ಎರಡು ಕಂಟೇನರ್ಗಳು 2025ರ ಅಕ್ಟೋಬರ್ 16ರಂದು ನಾಪತ್ತೆಯಾಗಿದ್ದವು. ಮಹಾರಾಷ್ಟ್ರ ಮತ್ತು ಕರ್ನಾಟಕದ ಪೊಲೀಸರು ಈ ಪ್ರಕರಣವನ್ನು ಹೊರತರಲು ಶಕ್ತಿಮೀರಿ ಪ್ರಯತ್ನಿಸಿದ್ದು ಇತಿಹಾಸ. ಉಭಯ ರಾಜ್ಯಗಳ ಪೊಲೀಸರು ಈ ನಿಟ್ಟಿನಲ್ಲಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು.
ವರದಿಗಳ ಪ್ರಕಾರ, ಈ ಹಣವನ್ನು ಕರ್ನಾಟಕದಿಂದ ಗುಜರಾತ್ಗೆ ಸಾಗಿಸಿ, ನಂತರ ಬೇರೆ ಬೇರೆ ಮುಖಬೆಲೆಯ ನೋಟುಗಳಾಗಿ ಪರಿವರ್ತಿಸಿ ಮಹಾರಾಷ್ಟ್ರಕ್ಕೆ ಸಾಗಿಸಲು ಉದ್ದೇಶಿಸಲಾಗಿತ್ತು.
‘ಕಂಟೇನರ್ ದರೋಡೆಗೆ ಕಿಶೋರ್ ಶೇಠ್ ಯೋಜನೆ ರೂಪಿಸಿದ್ದರು. ಅವರ ಸಹಚರರು ನನಗೆ ಬಂದೂಕು ತೋರಿಸಿ ಅಪಹರಿಸಿದ್ದರು. ಒಂದು ತಿಂಗಳಿಗೂ ಹೆಚ್ಚು ಕಾಲ ವಶದಲ್ಲಿಟ್ಟುಕೊಂಡು ರೂ.400 ಕೋಟಿ ನೀಡುವಂತೆ ಒತ್ತಾಯಿಸಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದರು. ಕೊನೆಗೂ ಅಲ್ಲಿಂದ ತಪ್ಪಿಸಿಕೊಂಡು ಬಂದೆ ಎಂದು ಇಗತಪುರಿ ನಿವಾಸಿ ಸಂದೀಪ್ ಪಾಟೀಲ ಅವರು ನಾಸಿಕ್ ಗ್ರಾಮೀಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
‘ಕರ್ನಾಟಕ ಮತ್ತು ಗೋವಾ ಪೊಲೀಸರ ಸಮನ್ವಯದೊಂದಿಗೆ ತನಿಖೆ ನಡೆಸಲಾಗುತ್ತಿದೆ. ಠಾಣೆಯ ಬಿಲ್ಡರ್ ಆಗಿರುವ ವಿರಾಟ್ ಗಾಂಧಿ ಅಹಮದಾಬಾದ್ ಮೂಲದ ಹವಾಲಾ ಆಪರೇಟರ್ ಆಗಿದ್ದಾರೆ ಎಂದು ನಾಸಿಕ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಬಾಳಾಸಾಹೇಬ ಪಾಟೀಲ ತಿಳಿಸಿದ್ದಾರೆ.
ಎಫ್ಐಆರ್ನಲ್ಲಿ ಠಾಣೆಯ ಬಿಲ್ಡರ್ ಒಬ್ಬರ ಹೆಸರಿದ್ದು, ಕಂಟೇನರ್ಗಳು ಉದ್ದೇಶಿತ ಸ್ಥಳಗಳಿಗೆ ತಲುಪಿದ್ದರೆ ಆ ಬಿಲ್ಡರ್ ಪ್ರಮುಖ ಫಲಾನುಭವಿಯಾಗುತ್ತಿದ್ದರು ಎನ್ನಲಾಗಿದೆ.


