ಬೆಳಗಾವಿ:ಅತ್ಯಾಚಾರ ಎಸಗುವವರಿಗೆ ಅತ್ಯಂತ ತ್ವರಿತ ಗತಿಯಲ್ಲಿ ಶಿಕ್ಷೆಯನ್ನು ಜಾರಿಗೊಳಿಸುವ ಮೂಲಕ ಇಡೀ ರಾಜ್ಯದಲ್ಲಿ ಬೆಳಗಾವಿ ನ್ಯಾಯಾಲಯ ಹೆಸರುವಾಸಿಯಾಗಿದೆ, ಕಳೆದ ಎರಡು ವರ್ಷಗಳಿಂದ ಸಾಕಷ್ಟು ಪರಿಣಾಮಕಾರಿಯಾದ ತೀರ್ಪುಗಳನ್ನು ಪ್ರಕಟಿಸಿ ನಾಡಿನ ಗಮನ ಸೆಳೆದಿದೆ. ಶನಿವಾರ ಇಲ್ಲಿಯ ನ್ಯಾಯಾಲಯ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ಹೊರಡಿಸಿದೆ.
ಬೆಳಗಾವಿಯಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯ ಅತ್ಯಂತ ಮಹತ್ವದ ತೀರ್ಪು ಪ್ರಕಟಿಸಿದೆ.
ಬೆಳಗಾವಿಯನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣ ಇದಾಗಿತ್ತು. ಇಂತಹ ಪ್ರಕರಣವೊಂದರಲ್ಲಿ ನಾಲ್ವರು ಆರೋಪಿಗಳನ್ನು ಅಪರಾಧಿ ಎಂದು ಘೋಷಿಸಿ ಇಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ಮತ್ತಿಬ್ಬರಿಗೆ 20 ವರ್ಷಗಳ ಕಠಿಣ ಕಾರಾಗ್ರಹ ಶಿಕ್ಷೆ ವಿಧಿಸಿ ಬೆಳಗಾವಿಯ ವಿಶೇಷ ಶೀಘ್ರಗತಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಶನಿವಾರ ಮಹತ್ವದ ತೀರ್ಪು ನೀಡಿದೆ.
ಕಳೆದ ವರ್ಷ ಮೇ 10 ರಂದು ಮಧ್ಯಾಹ್ನ ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿ ಸಾವಗಾಂವದ ತೋಟದ ಮನೆಗೆ ಕರೆದೊಯ್ದು ಅಲ್ಲಿ ಆಕೆಗೆ ಮದ್ಯ ಕುಡಿಸಿ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಬಗ್ಗೆ ಸಂತ್ರಸ್ತೆಯ ತಾಯಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಸಾಕೀಬ್ ಬೇಗ್ಫಯಾಜ ನಿಜಾಮಿ (22) ಗಾಂಧಿನಗರ ಬೆಳಗಾವಿ, ರವಿ ಸಿದ್ದಪ್ಪ ನಾಯ್ಕೋಡಿ (34) ರಾಜಾರಾಮನಗರ, ಉದ್ಯಮಭಾಗ ಹಾಗೂ ಇನ್ನಿಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರು ತೋಟದ ಮನೆಗೆ ಬಾಲಕಿಯನ್ನು ಕರೆದೊಯ್ದು ಅಮಾನುಷವಾಗಿ ಅತ್ಯಾಚಾರ ಎಸಗಿದ್ದರು. ನಂತರ ಬಾಲಕಿಯ ಕುತ್ತಿಗೆಯಲ್ಲಿದ್ದ ಒಂದು ತೊಲೆ ಬಂಗಾರದ ಸರವನ್ನು ಕಿತ್ತುಕೊಂಡಿದ್ದರು.
ಸಾವಗಾಂವದ ರೋಹನ ರಾಜೇಶ ಕುಮಾರ ಪಾಟೀಲ,(23) ಆಶುತೋಷ ಮಾರುತಿ ಪಾಟೀಲ (25) ಆರೋಪಿಗಳಿಗೆ ತಮ್ಮ ಫಾರ್ಮಹೌಸನ್ನು ಬಾಡಿಗೆಗೆ ಕೊಟ್ಟಿದ್ದರು. ಅತ್ಯಾಚಾರ ಎಸಗಿದ ನಾಲ್ವರು ಆರೋಪಿಗಳಲ್ಲಿ ಪೊಲೀಸ್ ಅಧಿಕಾರಿಯ ಮಗ ಶಾಮೀಲಾಗಿದ್ದರಿಂದ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿತ್ತು. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಅಂದಿನ ಇನ್ಸಪೆಕ್ಟರ್ ಧಾಮಣ್ಣವರ ತನಿಖೆ ನಡೆಸಿ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು, 17 ಸಾಕ್ಷಿಗಳ ವಿಚಾರಣೆ, 124 ದಾಖಲೆಗಳು ಹಾಗೂ 5 ಮುದ್ದೆಮಾಲು ಆಧಾರದಲ್ಲಿ ಆಪರಾಧ ಸಾಬೀತಾಗಿರುವುದಾಗಿ ಆದೇಶಿಸಿದ್ದು, ಸಾಕೀಬ್ ಬೇಗ್ಫಯಾಜ ನಿಜಾಮಿ (22) ಗಾಂಧಿನಗರ ಬೆಳಗಾವಿ, ರವಿ ಸಿದ್ದಪ್ಪ ನಾಯ್ಕೋಡಿ ಉದ್ಯಮಭಾಗ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ೮, 8,76,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸಾವಗಾಂವದ ತೋಟದ ಮನೆಯ ರೋಹನ ರಾಜೇಶ ಕುಮಾರ ಪಾಟೀಲ(23) ಆಶುತೋಷ ಮಾರುತಿ ಪಾಟೀಲ (25)ಗೆ 20 ವರ್ಷಗಳ ಕಠಿಣ ಕಾರಾಗ್ರಹ ಶಿಕ್ಷೆ ಹಾಗೂ ತಲಾ 6,00,000 ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 10 ಲಕ್ಷ ರೂ. ಪರಿಹಾರಧನ ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಲ್. ವಿ ಪಾಟೀಲ ವಾದ ಮಂಡಿಸಿದರು.


