ಬೆಳಗಾವಿ: ಸುಳೇಭಾವಿ ಗ್ರಾಮದ ಹತ್ತಿರ ರೈಲ್ವೆ ಮೇಲ್ಸೇತುವೆ ಕೆಳಗಿನ ರಸ್ತೆ ನಿರ್ಮಾಣ ಮತ್ತು ಕೃಷಿ ಚಟುವಟಿಕೆಗೆ ಜಮೀನುಗಳಿಗೆ ತೆರಳಲು ದಾರಿ ಮಾಡಿಕೊಡುವಂತೆ ಒತ್ತಾಯಿಸಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ರ್ಯಾಲಿ ಮೂಲಕ ತೆರಳಿ ಅಲ್ಲಿ ತಮ್ಮ ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದರು.
ಸುಳೇಭಾವಿ, ಚಂದೂರ ಮತ್ತು ಖನಗಾಂವ ಈ ಮೂರು ಗ್ರಾಮಗಳ ಮಧ್ಯದಲ್ಲಿ ಇರುವ ರೈಲ್ವೆ ಮೇಲ್ಸೇತುವೆ 7/Aಇದರ ಕೇಳಗೆ ಸುಳೇಬಾವಿ ಗ್ರಾಮಕ್ಕೆ ಹೋಗುವ ರಸ್ತೆಯಿದ್ದು ಅದನ್ನು ನವೀಕರಿಸಬೇಕಾಗಿದೆ. ಅಲ್ಲದೇ ಸುಮಾರು 300 ಎಕರೆ ಜಮೀನಿಗಳಿಗೆ ಹೋಗಲು ದಾರಿ ಇಲ್ಲದೆ ರೈತರಿಗೆ ನಿತ್ಯ ತೊಂದರೆಯಾಗಿದೆ. ಕೂಡಲೇ ರೈತರ ಜಮೀನುಗಳಿಗೆ ಹೋಗಲು ದಾರಿ ವ್ಯವಸ್ಥೆ ಮಾಡಿ ಕೊಡುವಂತೆ ಆಗ್ರಹಿಸಿದರು.
ಬಂದಾದ ರಸ್ತೆ ಮತ್ತೆ ತೆರೆಯಿರಿ: ಹೊಲಗಳಿಗೆ ಹೋಗಲು ಇದ್ದ ರಸ್ತೆಯನ್ನು ಬಂದ ಮಾಡಿದ್ದರಿಂದ ಮಳೆಗಾಳದ ಸಂದರ್ಭದಲ್ಲಿ ನೀರು ನಿಂತು ಈ ರಸ್ತೆಯು ಸಂಪೂರ್ಣ ಬಂದಾಗಿದೆ. ಇದರಿಂದ ರೈತರಿಗೆ ಹಾಗೂ ಸ್ಥಳೀಯ ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. ಶೀಘ್ರವೇ ಬಂದಾದ ರಸ್ತೆಯನ್ನು ಪುನಃ ಪ್ರಾರಂಭಿಸಿ ರೈತರ ಹಿತ ಕಾಪಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪರಿಹಾರ ಕಾಣದ ರಸ್ತೆ ಸಮಸ್ಯೆ: ಸುಳಭಾವಿ ಗ್ರಾಮ ದೇವತೆಯಾದ ಮಹಾಲಕ್ಷ್ಮಿ ದೇವಿಯ ಜಾತ್ರಾ ಸಮಯದಲ್ಲಿ ಭಕ್ತಾಧಿಗಳಿಗೆ ಹಾಗೂ ಗ್ರಾಮಸ್ಕರಿಗೆ ದೇವಿಯ ಜಾತ್ರೆಗೆ ಹೋಗಲು ಈ ದಾರಿಯು ಬಹಳ ಅನುಕುಲಕರವಾಗಿದೆ. ಈ ರಸ್ತೆ ನವೀಕರಿಸಿ ಪುನಃ ಈ ರಸ್ತೆ ಪ್ರಾರಂಭಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವೇ ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಕ.ಯು.ವೆ ರಾಜ್ಯಾಧ್ಯಕ್ಷ ಸುನೀಲ್ ಎಂ. ಎಸ್. , ಜಿಲ್ಲಾಧ್ಯಕ್ಷ ಪ್ರಕಾಶ ದೇಗಾಂವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಜಮಾದಾರ, ರಾಚಪ್ಪ ಪಾಟೀಲ, ಸಬ್ಬಿರ ಕುದರಿ, ನಬಿಸಾಬ್ ಶಿಲ್ಲೆದಾರ, ಮಸ್ತಾನ ನೇಗಿನಾಳ, ನಿಂಗಪ್ಪ ಬಂಡಿವಡ್ಡರ, ನಾಗಪ್ಪ ಉಳವಿ, ಸೋಮಯ್ಯ ಜಂಬಗಿ, ಬೈರು ನಾಯಕ, ಕಿರಣ ವಾಳದ ಸೇರಿದಂತೆ ಇತರ ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾಗವಹಿಸಿದ್ದರು.


