ಬೆಳಗಾವಿ : ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ 3 ದಿನಗಳ ಮೊದಲ ಹಂತದ ಹುಂಡಿ ಎಣಿಕೆಯಲ್ಲಿ ರೂ. 1.99 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ.
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಹುಂಡಿಯಲ್ಲಿ ಸಲ್ಲಿಸಿದ ಕಾಣಿಕೆಯನ್ನು ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ, ತಹಶೀಲ್ದಾರ ಕಚೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳಿಂದ ಗುರುವಾರ ಏಣಿಕೆ ಮಾಡಲಾಗಿದೆ.
ಜ. 19 ರ ಎಣಿಕೆಯಲ್ಲಿ ರೂ. 8.65 ಲಕ್ಷ ಮೌಲ್ಯದ ಚಿನ್ನಾಭರಣ, ರೂ. 5.05 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹಾಗೂ ರೂ. 56.82 ಲಕ್ಷ ಮೌಲ್ಯದ ನಗದು, ಜ.21 ರಂದು ರೂ. 3.15 ಲಕ್ಷ ಮೌಲ್ಯದ ಚಿನ್ನ, ರೂ. 1.67 ಲಕ್ಷ ಮೌಲ್ಯದ ಬೆಳ್ಳಿ ಹಾಗೂ ರೂ. 72.99 ಲಕ್ಷ ಮೌಲ್ಯದ ನಗದು ಮತ್ತು ಜ. 22 ರಂದು ರೂ. 3.33 ಲಕ್ಷ ಮೌಲ್ಯದ ಚಿನ್ನ, ರೂ. 4.77 ಲಕ್ಷ ಮೌಲ್ಯದ ಬೆಳ್ಳಿ ಹಾಗೂ ರೂ. 42.83 ಲಕ್ಷ ಮೌಲ್ಯದ ನಗದು ಸೇರಿ ರೂ. 15.10 ಲಕ್ಷ ಮೌಲ್ಯದ ಚಿನ್ನ ಮತ್ತು ರೂ. 11.51 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹಾಗೂ ರೂ. 1.72 ಕೋಟಿ ಮೌಲ್ಯದ ನಗದು ಒಟ್ಟು ರೂ. 1.99 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹಗೊಂಡಿದೆ.
ಎಣಿಕೆ ಕಾರ್ಯದಲ್ಲಿ ಅಮಾನ್ಯಗೊಂಡ ದೇಶಿಯ ನೋಟುಗಳು ಹಾಗೂ ಅಮೇರಿಕಾ, ಯುರೋಪ್, ಓಮನ್, ಕೆನಡಾದ ವಿದೇಶಿ ಕರೆನ್ಸಿಗಳು ದೊರೆತಿವೆ. ಅಮಾನ್ಯಗೊಂಡ ಭಾರತೀಯ ರೂ. 1,000 ಮುಖಬೆಲೆಯ 1, ರೂ. 500 ಮುಖಬೆಲೆಯ 1, ರೂ. 2,000 ಮುಖಬೆಲೆಯ 1 ನೋಟುಗಳು ಇದರಲ್ಲಿವೆ. ಜೊತೆಗೆ ಅಮೇರಿಕಾದ 20 ಡಾಲರ್ ಮುಖಬೆಲೆಯ 1, ಯುರೋಪಿನ 10 ಮತ್ತು 5 ಯುರೋ ಮುಖಬೆಲೆಯ ತಲಾ 2, ಒಮನ್ 100 ಬೈಸಾ ಮತ್ತು 1 ರಿಯಾಲ್ ಮುಖಬೆಲೆಯ ತಲಾ 2 ಹಾಗೂ ಕೆನಡಾದ 20 ಡಾಲರ್ ಮುಖಬೆಲೆಯ 5 ನೋಟುಗಳು ಎಣಿಕೆಯಲ್ಲಿ ಶೇಖರಣೆಗೊಂಡಿವೆ ಎಂದು ಪ್ರಾಧಿಕಾರದ ಸಹಕಾರ್ಯದರ್ಶಿ ನಾಗರತ್ನಾ ಚೋಳಿನ ತಿಳಿಸಿದ್ದಾರೆ.


