ಬೆಳಗಾವಿ:
ಬೆಳಗಾವಿ ನಗರದಲ್ಲಿ ಆಟೋ ರಿಕ್ಷಾ ಗಳಿಗೆ ಮೀಟರ್ ಕಡ್ಡಾಯಗೊಳಿಸುವುದಾಗಿ ಈ ಹಿಂದೆ ಸಾಕಷ್ಟು ಜಿಲ್ಲಾಧಿಕಾರಿಗಳು ಕೇಳಿದ್ದರು. ಆದರೆ ಅದು ಜಾರಿಗೆ ಬರಲಿಲ್ಲ. ಈಗ ಜಿಲ್ಲಾಧಿಕಾರಿಯಾಗಿರುವ ಮಹಮ್ಮದ್ ರೋಷನ್ ಅವರು ಮುಂದಿನ ಎರಡು ತಿಂಗಳೊಳಗೆ ಮೀಟರ್ ಕಡ್ಡಾಯಗೊಳಿಸಲು ಸೂಚನೆ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ನಗರದಲ್ಲಿ ಆಟೊ ಮೀಟರ್ ಅಳವಡಿಸಲು ಜಿಲ್ಲಾಡಳಿತ ಮುಂದಾಗಿದೆ. ಇದರ ಬೆನ್ನಲ್ಲೇ ಇದೀಗ ಆಟೊರಿಕ್ಷಾದವರು ಮತ್ತೆ ತಮ್ಮ ಬೇಡಿಕೆ ಈಡೇರಿಸಲು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.
ಆಟೊ ರಿಕ್ಷಾ ಪ್ರಯಾಣ ಬಾಡಿಗೆ ದರ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ಆಟೋರಿಕ್ಷಾ ಓನರ್ಸ್ ಮತ್ತು ಡ್ರೈವರ್ಸ್ ಅಸೋಸಿಯೇಷನ್ ನವರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಮನ್ಸೂರ್ ಮಾತನಾಡಿ,
ತಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಅನಿರ್ದಿಷ್ಟ ಅವಧಿಗೆ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಗರದಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ಎಲೆಕ್ಟ್ರಿಕ್ ಆಟೊಗಳ ಸಂಚಾರ ಸ್ಥಗಿತಗೊಳಿಸಬೇಕು. ನಗರದಿಂದ 16 ಕಿ.ಮೀ ವ್ಯಾಪ್ತಿಯಲ್ಲಿ ಆಟೊರಿಕ್ಷಾಗಳ ಓಡಾಟಕ್ಕೆ ಅವಕಾಶ ಕಲ್ಪಿಸಬೇಕಿದ್ದು,ಆ ಮಿತಿಯನ್ನು 30 ಕಿ.ಮೀಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕನಿಷ್ಠ ಬಾಡಿಗೆ ದರವನ್ನು 1.5 ಕಿಲೋಮೀಟರ್ ಒಳಗೆ 50 ರೂಪಾಯಿ ನಿಗದಿಪಡಿಸಬೇಕು. ನಂತರ ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ ರೂ.30 ನಿಗದಿಪಡಿಸಬೇಕು. ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು ಜೀವನ ನಿರ್ವಹಣೆ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾಡಳಿತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಮಾಡಿದರು.
ಒಟ್ಟಾರೆ ಇದೀಗ ಜಿಲ್ಲಾಡಳಿತ ಇವರ ಬೇಡಿಕೆಗೆ ಸ್ಪಂದಿಸುತ್ತದೋ ಕಾದು ನೋಡಬೇಕಾಗಿದೆ. ದೇಶದ ವಿವಿಧ ಮಹಾನಗರಗಳಲ್ಲಿ ಆಟೋರಿಕ್ಷಾಗಳಿಗೆ ಮೀಟರ್ ಕಡ್ಡಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಮೀಟರ್ ಕಡ್ಡಾಯಗೊಳಿಸಬೇಕು ಎನ್ನುವುದು ಬಹುಜನರ ಬೇಡಿಕೆಯಾಗಿದೆ.


