ಬೆಳಗಾವಿ : ಪರಿಶಿಷ್ಟ ಜಾತಿಯ ಬುದ್ಧಿಮಾಂದ್ಯ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಇಲ್ಲಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಹುಸೇನಸಾಬ ಇಮಾಮಸಾಬ ನದಾಫ/ಪಿಂಜಾರ ಶಿಕ್ಷೆಗೊಳಗಾದ ಆರೋಪಿ.
ಕಟಕೋಳ ಪೊಲೀಸ್ ಠಾಣಾ ಹದ್ದಿಯ ಪೈಕಿ ಚಿಪ್ಪಲಕಟ್ಟಿ ಗ್ರಾಮದ ಪಿರ್ಯಾದಿದಾರಳ ಮನೆಯ ಮುಂದಿನ ಕಟ್ಟೆಯ ಮೇಲೆ ದಿನಾಂಕ: 26-03-2021 ರಂದು ಸಂಜೆ 5 ಗಂಟೆಗೆ ಇದ್ದಳು.
ಯುವತಿ ಬುದ್ದಿಮಾಂದ್ಯಳು, ಹಿಂದೂ ಪರಿಶಿಷ್ಟ ಪಂಗಡಕ್ಕೆ ಸೇರಿದವಳು ಎಂದು ಗೊತ್ತಿದ್ದರೂ ಆರೋಪಿತನು ಪಿರ್ಯಾದಿದಾರಳ ಮಗಳ ಮೇಲೆ ಅತ್ಯಾಚಾರ ಎಸಗಿದ ಅಪರಾಧದ ಬಗ್ಗೆ ಆಗಿನ ತನಿಖಾಧಿಕಾರಿ ರಾಮದುರ್ಗದ ಡಿಎಸ್ ಪಿ ರಾಮನಗೌಡ ಹಟ್ಟಿ ತನಿಖೆ ಕೈಗೊಂಡು ಕಲಂ 376(2)(ಎಲ್) ಐಪಿಸಿ ಮತ್ತು ಕಲಂ. 3(1)(ಡಬ್ಲೂ)(ಐ), 3(2)(5) ಎಸ್ಸಿ/ಎಸ್ಟಿ (ಪಿ.ಓ.ಎ) ತಿದ್ದುಪಡಿ ಕಾಯ್ದೆ 2015 ಅಡಿಯಲ್ಲಿ ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಮಾನ್ಯ ನ್ಯಾಯಾಧೀಶರಾದ ಸವಿತಾಕುಮಾರಿ ಎನ್., 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ ಅವರು ಪ್ರಕರಣದ ವಿಚಾರಣೆ ಮಾಡಿ ಆರೋಪಿ ಮೇಲೆ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿತನಿಗೆ ಕಲಂ. 376(2)(ಎಲ್) ಐಪಿಸಿ ರ ಅಡಿಯಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 5,000/- ದಂಡ, ಕಲಂ 3(1)(ಡಬ್ಲೂ)(ಐ) ರ ಅಡಿಯಲ್ಲಿ 6 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ಕಲಂ. 3(2)(5) ಎಸ್ಸಿ/ಎಸ್ಟಿ (ಪಿ.ಓ.ಎ) ತಿದ್ದುಪಡಿ ಕಾಯ್ದೆ 2015 ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ರೂ. 5,000/- ದಂಡ ವಿಧಿಸಿ ಪ್ರಕರಣದ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ
ಆರ್. ಜಿ. ದೇವರೆಡ್ಡಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.


