ಬೆಳಗಾವಿ : ಬೆಳಗಾವಿ ನಗರದಲ್ಲಿ ಮತ್ತೊಬ್ಬ ಅತ್ಯಾಚಾರಿಗೆ ನ್ಯಾಯಾಲಯ ಬುಧವಾರದಂದು ಕಠಿಣ ಶಿಕ್ಷೆಯನ್ನು ಹೊರಡಿಸಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕವಾಗಿ ಅತ್ಯಾಚಾರ ಎಸಗಿದ ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಮಹತ್ವದ ತೀರ್ಪು ನೀಡಿದೆ.
ಬೆಳಗಾವಿಯ ಸಮರ್ಥನಗರ ನಾಲ್ಕನೇ ಕ್ರಾಸಿನ
ನಿಂಗಪ್ಪ /ವಿಶಾಲ ಭೈರಪ್ಪ ಹೊಸಮನಿ (23)ಶಿಕ್ಷೆಗೊಳಗಾದ ಆರೋಪಿ. ನೊಂದ ಬಾಲಕಿ ಅಪ್ರಾಪ್ತ ವಯಸ್ಸಿನವಳು ಎಂದು ಗೊತ್ತಿದರೂ
ಆರೋಪಿ ಬಾಲಕಿಗೆ ದಿನಾಂಕ 22-04-2022 ರಂದು ಮಧ್ಯಾಹ್ನ 12:30 ಗಂಟೆಗೆ ತನ್ನ ಮನೆಗೆ ಕರೆದುಕೊಂಡು ಹೋಗಿ ಅವಳಿಗೆ ಮನೆಯಲ್ಲಿ ಅಕ್ರಮವಾಗಿ ಕೂಡಿಟ್ಟು ಲೈಂಗಿಕ ಅತ್ಯಾಚಾರ ಮಾಡಿದಲ್ಲದೆ ದಿನಾಂಕ 21-04-2024 ರಂದು ಮಹಾರಾಷ್ಟ್ರದ ಒಂದು ಲಾಡ್ಜ್ ದಲ್ಲಿ ದಿನಾಂಕ 13-05-2024 ರವರೆಗೆ ಕೂಡಿಟ್ಟು ನಿರಂತರ ಅತ್ಯಾಚಾರ ಮಾಡಿದ್ದ. ಈ ಅಪರಾಧಕ್ಕಾಗಿ ದಾಖಲಾಧಿಕಾರಿ ಮಾರ್ಕೆಟ್ ಪಿಎಸ್ ಐ ಮಹಾಂತೇಶ ಮಠಪತಿ ಪ್ರಕರಣ ದಾಖಲಿಸಿಕೊಂಡಿದ್ದರು. ಮುಂದಿನ ಕ್ರಮವನ್ನು ತನಿಖಾಧಿಕಾರಿ ಸಿಪಿಐ ಮಹಾಂತೇಶ ಕೆ. ಧಾಮಣ್ಣನವರ ಕೈಗೊಂಡಿದ್ದರು. ಪ್ರಕರಣದ ಮುಂದಿನ ತನಿಖೆ ಮಾಡಿ ಪ್ರಕರಣವನ್ನು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಮಾನ್ಯ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಇವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 09 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ, 51 ದಾಖಲೆಗಳು, 2 ಮುದ್ದೆಮಾಲು ಆಧಾರದಲ್ಲಿ ಆರೋಪಿ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ. ಆರೋಪಿತನಿಗೆ ಪೋಕ್ಸೊ ಕಲಂ 6 ರ ಪ್ರಕಾರ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ದಂಡ ಒಂದು ಲಕ್ಷ ರೂಪಾಯಿ, ದಂಡದ ಹಣ ತುಂಬದೇ ಇದ್ದ ಕಾಲಕ್ಕೆ 2 ವರ್ಷಗಳ ಶಿಕ್ಷೆ ವಿಧಿಸಿ ಪ್ರಕರಣದ ತೀರ್ಪು ನೀಡಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 4 ಲಕ್ಷಗಳನ್ನು ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿರುತ್ತದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ.ಪಾಟೀಲ ಪ್ರಕರಣ ನಡೆಸಿ ಹಾಗೂ ವಾದ ಮಂಡಿಸಿದ್ದರು.


