ಬೆಳಗಾವಿ : ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಂಬಂಧಪಟ್ಟಂತೆ ಬೆಳಗಾವಿ ಗಡಿ ವಿಷಯಕ್ಕೆ ಸಂಬಂಧಿಸಿದ ಮಹತ್ವದ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ಬರಲಿದೆ.
22 ವರ್ಷಗಳ ಹಿಂದೆ ಮಹಾರಾಷ್ಟ್ರ ಸರಕಾರ ಸಲ್ಲಿಸಿರುವ ಗಡಿ ವಿವಾದದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರದಂದು ಕೈಗೆತ್ತಿಕೊಳ್ಳಲಿದೆ. ಇದು ಗಡಿಭಾಗದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಮರಾಠಿ ಭಾಷೆಗರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ, ಬಾಲ್ಕಿ, ಖಾನಾಪುರ, ನಿಪ್ಪಾಣಿ ಸೇರಿದಂತೆ ಕರ್ನಾಟಕದಲ್ಲಿರುವ 865 ನಗರ, ಪಟ್ಟಣ ಮತ್ತು ಗ್ರಾಮಗಳು ತನಗೆ ಸೇರಬೇಕು ಎಂದು ಮಹಾರಾಷ್ಟ್ರ ಸರಕಾರ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಕರ್ನಾಟಕದ ಪರವಾಗಿ ಹಿರಿಯ ನ್ಯಾಯವಾದಿ ನಿಶಾಂತ್ ಪಾಟೀಲ್ ವಕಾಲತ್ತು ವಹಿಸಲಿದ್ದಾರೆ. ಗಡಿ ವಿವಾದ ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬಾರದು, ಈ ಕಾರಣದಿಂದ ಅರ್ಜಿಯನ್ನು ವಜಾ ಮಾಡಬೇಕು ಎನ್ನುವುದು ಕರ್ನಾಟಕದ ವಾದವಾಗಿದೆ. ಗಡಿ ಬದಲಾಯಿಸುವ ಅಧಿಕಾರ ಇರುವುದು ಕೇವಲ ಸಂಸತ್ತಿಗೆ ಮಾತ್ರ ಎನ್ನುವುದು ಕರ್ನಾಟಕದ ವಾದವಾಗಿದೆ. ಹೀಗಾಗಿ ಇದು ಗಡಿಭಾಗದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.


