ಬೆಂಗಳೂರು: ಡಿಜಿಪಿ ರಾಮಚಂದ್ರರಾವ್ಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಕುಂದಾನಗರಿ ಬೆಳಗಾವಿಯೊಂದಿಗಿನ ನಂಟು ಇರಬಹುದೆಂಬ ಶಂಕೆ ಇದೀಗ ಮೂಡಿದೆ. ಸುಮಾರು ಎಂಟು ವರ್ಷಗಳ ಹಿಂದೆ ರಾಮಚಂದ್ರರಾವ್ ಬೆಳಗಾವಿಯಲ್ಲಿ ಐಜಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ.
ವಿಡಿಯೋದಲ್ಲಿರುವ ಮಹಿಳೆಯೂ ಬೆಳಗಾವಿ ನಿವಾಸಿಯಾಗಿರಬಹುದು ಎಂಬ ಮಾಹಿತಿ ಹೊರಬಂದಿದ್ದು, ಈ ಸಂಬಂಧ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಅಗತ್ಯ ದಾಖಲೆಗಳು ಮತ್ತು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.
ಬೆಳಗಾವಿ ಐಜಿ ಕಚೇರಿಯಲ್ಲೇ ಘಟನೆ?: ಆ ಸಮಯದಲ್ಲಿ
ರಾಮಚಂದ್ರರಾವ್ ಬೆಳಗಾವಿ ಐಜಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದೇ ಅವಧಿಯಲ್ಲಿ ಐಜಿ ಕಚೇರಿಯೊಳಗೇ ಅಸಭ್ಯ ಚಟುವಟಿಕೆಗಳು ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಸದ್ಯ ಆ ಕಚೇರಿ ಸಂಪೂರ್ಣ ನವೀಕರಣಗೊಂಡಿದ್ದು, ಹಿಂದಿನ ವ್ಯವಸ್ಥೆಗಳು ಈಗಿಲ್ಲ ಎನ್ನಲಾಗಿದೆ. ಮಹಿಳೆಯೊಂದಿಗೆ ರಾಮಚಂದ್ರರಾವ್ ಹೊಂದಿದ್ದ ಸಂಪರ್ಕಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ತನಿಖಾ ವಲಯಕ್ಕೆ ಲಭ್ಯವಾಗಿದ್ದು, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ.


