ಬೆಂಗಳೂರು: ಕಚೇರಿಯಲ್ಲಿರುವಾಗಲೇ ಕರ್ನಾಟಕ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆ ಜೊತೆ ಸರಸವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಡಿಜಿಪಿ ರಾಮಚಂದ್ರ ರಾವ್ ಅವರು ಮಹಿಳೆ ಜೊತೆ ಕಚೇರಿಯಲ್ಲೇ ಮಹಿಳೆಯರೊಂದಿಗೆ ಸರಸವಾಡಿದ್ದು ಎನ್ನಲಾದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಮಚಂದ್ರರಾವ್ ಸದ್ಯ ಡಿಸಿಆರ್ ಇ ಡಿಜಿಪಿಯಾಗಿದ್ದು ತಮ್ಮ ಹುದ್ದೆಯ ಘನತೆ ಮರೆತು ಸಮವಸ್ತ್ರದಲ್ಲೇ ಮಹಿಳೆಯ ಜೊತೆ ಕಚೇರಿಯಲ್ಲೇ ರಾಸಲೀಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಡಿಜಿಪಿ ರಾಮಚಂದ್ರ ರಾವ್ ಅವರು ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನವಾಗಿರುವ ನಟಿ ರನ್ಯಾ ರಾವ್ ಅವರ ಮಲ ತಂದೆಯಾಗಿದ್ದಾರೆ. ಪುತ್ರಿಯ ಪ್ರಕರಣದಲ್ಲಿಯೂ ಇವರಿಗೆ ಸಂಕಷ್ಟ ಎದುರಾಗಿತ್ತು.
ವೈರಲ್ ಆಗಿರುವ ವಿಡಿಯೊಗಳಲ್ಲಿ ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲಿ, ಸಮವಸ್ತ್ರದಲ್ಲಿರುವಾಗಲೇ ಹಲವು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಕಂಡುಬಂದಿದೆ. ಕಚೇರಿಗೆ ಬರುವ ಬರುವ ಕೆಲ ಮಹಿಳೆಯರಿಗೆ ಚುಂಬಿಸುವುದು ಹಾಗೂ ತಬ್ಬಿಕೊಳ್ಳುವುದು ವೀಡಿಯೊದಲ್ಲಿ ಕಂಡುಬಂದಿದೆ.
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಉನ್ನತ ಪೊಲೀಸ್ ಅಧಿಕಾರಿ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ತಂದಿದೆ. ಈ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಈ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿವೆ.
ಆರೋಪ ಅಲ್ಲಗಳೆದ ಡಿಜಿಪಿ
ಈ ಆರೋಪವನ್ನು ಡಿಜಿಪಿ ರಾಮಚಂದ್ರರಾವ್ ಅವರು ಅಲ್ಲಗಳೆದಿದ್ದು, ಅದು ಎಐ ವೀಡಿಯೊ ಆಗಿದ್ದು, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ್ ಭೇಟಿಗೆ ಆಗಮಿಸಿದ ಅವರನ್ನು ಗೃಹ ಸಚಿವರು ಭೇಟಿಗೆ ಒಪ್ಪಿಲ್ಲ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಚಂದ್ರ ರಾವ್, ವಿಡಿಯೋ ಬಗ್ಗೆ ಸಮಜಾಯಿಷಿ ನೀಡಿದ್ದಾರೆ.
ಅದು ಈಗಿನ ವಿಡಿಯೋ ಅಲ್ಲ. 8 ವರ್ಷದ ಹಳೇ ವಿಡಿಯೋ. ಆಗ ನಾನು ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದೆ. ಯಾರೋ ಷಡ್ಯಂತ್ರ ನಡೆಸಿ ಈಗ ವಿಡಿಯೋ ವೈರಲ್ ಮಾಡಿದ್ದಾರೆ ಎಂದಿದ್ದಾರೆ.
ಇದೆಲ್ಲ ಸುಳ್ಳು ವಿಡಿಯೋ. ನನ್ನ ವಿರುದ್ಧ ಆರೋಪ ಮಾಡಲು ಇಂತಹ ವಿದಿಯೋ ಬಿಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರಾಮಚಂದ್ರ ರಾವ್ ಪ್ರಸ್ತುತ ಡಿಸಿಆರ್ ಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಡಿಜಿಪಿ ಆಗಿದ್ದಾಗ ಕರ್ತವ್ಯದ ವೇಳೆ ಕಚೇರಿಯಲ್ಲಿಯೇ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ಇದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವೀಡಿಯೊ ಆಗಿದೆ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ತರಲು ಹಾಗೂ ನನ್ನ ತೇಜೋವಧೆ ಮಾಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿಯ ಷಡ್ಯಂತ್ರ ರೂಪಿಸಿವೆ’ ಎಂದು ಅವರು ಹೇಳಿದ್ದಾರೆ.


