ಹಳಿಯಾಳ : ದೇಶಿ ಕ್ರೀಡೆ ಕುಸ್ತಿಯು ಭಾರತದ ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯ ಕ್ರೀಡೆಯಾಗಿದ್ದು, ಶಕ್ತಿ, ಸ್ಥೈರ್ಯ ಮತ್ತು ಕೌಶಲ್ಯದ ಪ್ರತೀಕವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕುಸ್ತಿ ಕ್ರೀಡೆಗೆ ಅಪಾರ ಜನಪ್ರಿಯತೆ ಇದೆ ಎಂದು ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಮೈದಾನದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಅವರು ಚಾಲನೆ ನೀಡಿ ಮಾತನಾಡಿದರು.
ಈ ಪಂದ್ಯಾವಳಿಯಲ್ಲಿ ದೇಶ–ವಿದೇಶಗಳಿಂದ ಆಗಮಿಸಿದ ಅತ್ಯುತ್ತಮ ಕುಸ್ತಿಪಟುಗಳು ಭಾಗವಹಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ಎಲ್ಲ ಕ್ರೀಡಾಪಟುಗಳಿಗೆ ಅವರು ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪಂದ್ಯಾವಳಿ ಆಯೋಜಕ ರಾಜೀವ್ ಮಾರುತಿ ಪೆಜೋಳ್ಳಿ, ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಮುಖಂಡರು, ಹಿತೈಷಿಗಳು, ಕ್ರೀಡಾಪಟುಗಳು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.


