ಬೆಳಗಾವಿ: ರಾಜ್ಯದ ಶಿಕ್ಷಣ ಸಚಿವರು ವಿಧಾನಸಭೆ ಒಳಗೂ ಹೊರಗೂ ಕೂಡಿಯೇ ಸರಕಾರಿ ಶಾಲೆಗಳ ಮುಚ್ಚುವ ಸಂಬಂಧ ಸುಳ್ಳು ಹೇಳುತ್ತಲೇ ಬಂದಿದ್ದಾರೆ. ಹಲವಾರು ಶಾಲೆಗಳನ್ನು ವಿಲೀನಗೊಳಿಸಿ ಒಂದೇ ” ಮ್ಯಾಗ್ನೆಟ್ “ಸುಧಾರಿತ ಶಾಲೆಯನ್ನು ಆರಂಭಿಸುವ ಯೋಜನೆಯು ಈಗ ಬಡವರ, ಕಾರ್ಮಿಕರ, ರೈತರ ಮಕ್ಕಳ ಶಿಕ್ಷಣಕ್ಕೆ ಕುತ್ತು ತಂದಿದೆ.
ಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದ 40 ಸಾವಿರ
ಸರಕಾರಿಗಳು, ಬೆಳಗಾವಿ ಜಿಲ್ಲೆಯ 2 ಸಾವಿರ ಶಾಲೆಗಳು
ಮುಚ್ಚಳಿವೆ. ಮಕ್ಕಳು ಐದರಿಂದ 10,15 ಕಿ. ಮೀ. ದೂರದ ಶಾಲೆಗಳಿಗೆ ಹೋಗುವ ಅನಿವಾರ್ಯತೆ ಉಂಟಾಗಲಿದೆ.
ಹಳ್ಳಿ ಹಳ್ಳಿಗಳಲ್ಲಿ ಪೋಷಕರು, ಆಯಾ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಈ ಹೊಸ ಯೋಜನೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮುಚ್ಚಲಿರುವ ಶಾಲೆಗಳ ಪಟ್ಟಿಯನ್ನು ನಾನು
ತೆಗೆದುಕೊಂಡಿದ್ದೇನೆ. ಇದನ್ನು ನೋಡಿದರೆ ಸರಕಾರ
ಎಂಥಾ ಅನಾಹುತಕ್ಕೆ ಕೈ ಹಾಕಿದೆ ಎಂಬುದು
ಗೊತ್ತಾಗುತ್ತದೆ.
ಮೊದಲೇ ಮಕ್ಕಳನ್ನು ಶಾಲೆಗೆ ಮನೆಯ ಹತ್ತಿರದ
ಶಾಲೆಗೆ ಕಳಿಸಿ ದುಡಿಯಲು ಹೋಗುವ ಬಡ ವರ್ಗದವರಿಗೆ ದೂರದ ಶಾಲೆಗಳಿಗೆ ಕಳಿಸುವುದು ಮತ್ತು ಹೆಚ್ಚಿನ ಆರ್ಥಿಕ ಭಾರವನ್ನು ಹೊಟ್ಟುಕೊಳ್ಳುವದು ಅಸಾಧ್ಯದ ಮಾತು.
ಇಂದು ರವಿವಾರ ಬೆಳಗಾವಿಯ ಕಿತ್ತೂರು ಚನ್ನಮ್ಮ
ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಪೋಷಕರ, ಮಕ್ಕಳ, ಗ್ರಾಮ ಪಂಚಾಯತ ಅಧ್ಯಕ್ಷರ ಸಭೆಯನ್ನು
” ಎಡ್ಸೋ ” ಸಂಸ್ಥೆಯ ಹೋರಾಟಗಾರ ಮಹಾಂತೇಶ
ಬೀಳೂರು ಮತ್ತು ಗೆಳೆಯರು ಆಯೋಜಿದ್ದರು. ನಾನು ಹಾಗೂ ಸಾಹಿತಿ ಡಿ. ಎಸ್. ಚೌಗುಲೆ ಅತಿಥಿಗಳಾಗಿ
ಹಾಜರಿದ್ದೆವು. ಬೆಳಗಾವಿ ತಾಲ್ಲೂಕಿನ ಅನೇಕ
ಗ್ರಾಮ ಪಂಚಾಯತಗಳ ಅಧ್ಯಕ್ಷರು, ಸದಸ್ಯರು
ಭಾಗವಹಿಸಿದ್ದ ಈ ಸಮಾವೇಶದಲ್ಲಿ ” ಮ್ಯಾಗ್ನೆಟ್ ” ವಿರುದ್ಧ ಆಕ್ರೋಶ ಮುಗಿಲು ಮುಟ್ಟಿತ್ತು.
ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯತಗಳು ಈ ಯೋಜನೆಯ ವಿರುದ್ಧ ನಿರ್ಣಯ ಪಾಸು
ಮಾಡಲಿವೆ. ಕನ್ನಡ ಪರ ಸಂಘಟನೆಗಳು
ಶಿಕ್ಷಣದ ಇಲಾಖೆಯ ಮತ್ತು ಶಾಸಕರ ಮನೆಗಳ ಮುಂದೆ ಧರಣಿ ನಡೆಸಿ ಪ್ರತಿಭಟನೆ ನಡೆಸಲು ಸಭೆಯಲ್ಲಿ
ತೀರ್ಮಾನಿಸಲಾಯಿತು. ಕನ್ನಡ,ಮರಾಠಿ ಹಾಗೂ ಉರ್ದು ಭಾಷಿಕರು ಭಾಷಾ ಭೇದ ಬದಿಗಿಟ್ಟು ಹೋರಾಟಕ್ಕೆ
ಇಳಿಯಲು ಸಭೆಯು ನಿರ್ಧರಿಸಿತು.
-ಅಶೋಕ ಚಂದರಗಿ
ಅಧ್ಯಕ್ಷರು, ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೆಳಗಾವಿ


