ಬೆಳಗಾವಿ: ಬೆಳಗಾವಿಯಲ್ಲಿ ಮತ್ತೊಬ್ಬ ಅತ್ಯಾಚಾರಿಗೆ ನ್ಯಾಯಾಲಯ ಕಠಿಣ ಮತ್ತು ದೀರ್ಘಾವಧಿ ಕಾಲಕ್ಕೆ ಜೈಲಿನಲ್ಲಿ ಕೊಳೆಯುವ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಆರೋಪಿಗೆ 30 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 2,63,000 ರೂ. ದಂಡ ವಿಧಿಸಿ ಇಲ್ಲಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ- 01 ಶನಿವಾರ ಆದೇಶ ಹೊರಡಿಸಿದೆ. ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ ತಾಲೂಕಿನ ಚೆನ್ನಿಕೊಪ್ಪಿ ಗ್ರಾಮದ ಸ್ವಪ್ನಿಲ್ ರಾಜಾರಾಮ ಮಾನೆ (ವಯಸ್ಸು 23) ಶಿಕ್ಷೆಗೊಳಗಾದ ಆರೋಪಿ. ಈತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿ ಮದುವೆ ಆಗುವುದಾಗಿ ಹೇಳಿ ಒತ್ತಾಯದಿಂದ ಲೈಂಗಿಕ ಅತ್ಯಾಚಾರ ಮಾಡಿದ್ದ. ಅವಳ ನಗ್ನ ಫೋಟೋಗಳನ್ನು ತೆಗೆದು ವಾಟ್ಸಾಪ್ ಮೂಲಕ ಅವರ ಮನೆಯವರ ನಂಬರ್ ಗೆ ಕಳಿಸಿಕೊಟ್ಟು ಬೆದರಿಸಿದ್ದ. ಮೇಲಿಂದ ಮೇಲೆ ಲೈಂಗಿಕ ಅತ್ಯಾಚಾರ ಮಾಡುತ್ತಾ, ಬಾಲಕಿಗೆ ನೀನೇನಾದರೂ ಬೇರೆ ಮದುವೆ ಆದರೆ ನಾನು ನಿನ್ನ ಫೋಟೋಗಳನ್ನು ವೈರಲ್ ಮಾಡುತ್ತೇನೆ ಎಂದು ಹೇಳಿ ಬಾಲಕಿಯ ಮೊಬೈಲ್ ಕಸಿದುಕೊಂಡು ಹೋಗಿರುವ ಅಪರಾಧಕ್ಕೆ ಸಂಬಂಧಿಸಿದ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಿಎಸ್ಐ ಬಸಗೌಡ ನೇರ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಸಿಪಿಐ ವಿಶ್ವನಾಥ ಚೌಗುಲೆ ಮುಂದಿನ ತನಿಖೆ ನಡೆಸಿದ್ದರು. ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು ಪ್ರಕರಣವನ್ನು ವಿಚಾರಣೆ ಮಾಡಿ ಒಟ್ಟು 11 ಸಾಕ್ಷಿಗಳ ವಿಚಾರಣೆ, 84 ದಾಖಲೆ, 13 ಮುದ್ದೆಮಾಲು ಆಧಾರದ ಮೇಲೆ ಆರೋಪಿ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ. ಪೋಕ್ಸೊ ಕಲಂ 6 ರ ಪ್ರಕಾರ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡದ ಹಣ ತುಂಬದೇ ಇದ್ದ ಕಾಲಕ್ಕೆ ಎರಡು ವರ್ಷಗಳ ಒಂದು ವೇಳೆ ಆತ ದಂಡದ ಹಣ ತುಂಬದೇ ಇದ್ದಲ್ಲಿ ಎರಡು ವರ್ಷಗಳ ಶಿಕ್ಷೆ ಮತ್ತು ಕಲಂ 67 (ಬಿ) ಅಡಿ ಐದು ವರ್ಷಗಳ ಕಾರಾಗೃಹ ಶಿಕ್ಷೆ, ರೂ. 1 ಲಕ್ಷ ದಂಡ ತುಂಬದೇ ಇದ್ದ ಕಾಲಕ್ಕೆ ಎರಡು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ.4 ಲಕ್ಷಗಳನ್ನು ಪರಿಹಾರ ಧನವಾಗಿ ಪಡೆಯಲು ನ್ಯಾಯಾಲಯ ಆದೇಶಿಸಿದೆ. ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.


