ಭೋಪಾಲ್ : ವೈದ್ಯಕೀಯ ವಿಜ್ಞಾನದ ಪ್ರಕಾರ ಆರೋಗ್ಯವಂತ ಮನುಷ್ಯನಿಗೆ ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ನಿದ್ರೆ ಅತ್ಯಗತ್ಯ. ನಿದ್ರೆಯಿಲ್ಲದಿದ್ದರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದರೆ, ಮಧ್ಯಪ್ರದೇಶದ 75 ವರ್ಷದ ವೃದ್ಧರೊಬ್ಬರ ಪ್ರಕರಣವು ಈಗ ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸಿದೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯ ಚಾಣಕ್ಯಪುರಿ ಕಾಲೋನಿಯ ನಿವಾಸಿ ಮೋಹನಲಾಲ ದ್ವಿವೇದಿ ಎಂಬವರು ಕಳೆದ 50 ವರ್ಷಗಳಿಂದ ಒಂದು ಕ್ಷಣವೂ ನಿದ್ರೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.
ವರದಿ ಪ್ರಕಾರ, ಅವರು 1973ರಿಂದಲೇ ತಮಗೆ ನಿದ್ರೆ ಬರುವುದು ನಿಂತುಹೋಗಿದೆ ಎಂದು ಹೇಳಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ, ಇಷ್ಟು ದಶಕಗಳಿಂದ ನಿದ್ರೆ ಇಲ್ಲದಿದ್ದರೂ ಅವರು ಸಾಮಾನ್ಯ ಮನುಷ್ಯನಂತೆ ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ.
ನೋವು, ಆಯಾಸ ಇಲ್ಲ!
ತಮಗೆ ನಿದ್ರೆ ಬರುವುದಿಲ್ಲ, ಜೊತೆಗೆ ದೇಹಕ್ಕೆ ಪೆಟ್ಟಾದರೂ ಸಾಮಾನ್ಯರಂತೆ ನೋವಿನ ಅನುಭವವಾಗುವುದಿಲ್ಲ ಎಂದು ಮೋಹನಲಾಲ ದ್ವಿವೇದಿ ಹೇಳುತ್ತಾರೆ. ರಾತ್ರಿಯಿಡೀ ಎಚ್ಚರವಿದ್ದರೂ ಅವರ ಕಣ್ಣುಗಳಿಗೆ ಆಯಾಸವಾಗಲಿ ಅಥವಾ ಕೆಲಸದ ಸಾಮರ್ಥ್ಯದಲ್ಲಿ ಕುಸಿತವಾಗಲಿ ಕಂಡಬಂದಿಲ್ಲ. ಆರಂಭದಲ್ಲಿ ಈ ವಿಷಯವನ್ನು ಯಾರಿಗೂ ಹೇಳದ ಅವರು, ನಂತರ ಕುಟುಂಬದವರಿಗೆ ತಿಳಿಸಿದಾಗ ದೆಹಲಿ ಮತ್ತು ಮುಂಬೈನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಲಾಯಿತು. ಆದರೆ, ವೈದ್ಯರಿಗೆ ಇದರ ಹಿಂದಿನ ನಿಖರ ಕಾರಣ ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ವೃತ್ತಿಜೀವನದಲ್ಲಿ ಅಡ್ಡಿಯಾಗದ ನಿದ್ರೆ ಕೊರತೆ
ನಿದ್ರೆಯಿಲ್ಲದಿದ್ದರೂ ದ್ವಿವೇದಿ ಅವರ ವೃತ್ತಿಜೀವನ ಅತ್ಯಂತ ಯಶಸ್ವಿಯಾಗಿ ಸಾಗಿದೆ.
1973 ರಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಅವರು, 1974 ರಲ್ಲಿ ಲೋಕಸೇವಾ ಆಯೋಗದ ಪರೀಕ್ಷೆ ಪಾಸು ಮಾಡಿ ಡೆಪ್ಯುಟಿ ತಹಶೀಲ್ದಾರ್ ಆದರು. ಅಂತಿಮವಾಗಿ 2001 ರಲ್ಲಿ ಜಂಟಿ ಕಲೆಕ್ಟರ್ ಆಗಿ ನಿವೃತ್ತರಾದರು. ಇಡೀ ವೃತ್ತಿಜೀವನದಲ್ಲಿ ನಿದ್ರೆಯಿಲ್ಲದ ಕಾರಣ ಅವರಿಗೆ ಯಾವುದೇ ತೊಂದರೆಯಾಗಿಲ್ಲವಂತೆ!
“ಈಗ ನಿವೃತ್ತರಾಗಿರುವ ದ್ವಿವೇದಿ ಅವರು ರಾತ್ರಿಯಿಡೀ ಪುಸ್ತಕಗಳನ್ನು ಓದುತ್ತಾ ಅಥವಾ ಮಹಡಿಯ ಮೇಲೆ ಅಡ್ಡಾಡುತ್ತಾ ಸಮಯ ಕಳೆಯುತ್ತಾರೆ. ವಿಶೇಷವೆಂದರೆ ಅವರ ಪತ್ನಿಯೂ ದಿನಕ್ಕೆ ಕೇವಲ 3-4 ಗಂಟೆ ಮಾತ್ರ ನಿದ್ರೆ ಮಾಡುತ್ತಾರಂತೆ.”
ವೈದ್ಯರ ಅಭಿಪ್ರಾಯವೇನು?
ರೇವಾದ ಸಂಜಯ ಗಾಂಧಿ ಆಸ್ಪತ್ರೆಯ ಅಧೀಕ್ಷಕ ಡಾ. ರಾಹುಲ್ ಮಿಶ್ರಾ ಅವರ ಪ್ರಕಾರ, ಇದು ವೈದ್ಯಕೀಯ ದೃಷ್ಟಿಕೋನದಿಂದ “ಅತೀವ ಆಶ್ಚರ್ಯಕರ” ಸಂಗತಿ. “ನಿದ್ರೆಯಿಲ್ಲದೆ ಬದುಕುವುದು ಅಸಾಧ್ಯದ ಮಾತು. ಈ ಬಗ್ಗೆ ನಿದ್ರಾ ಚಿಕಿತ್ಸೆ ಮತ್ತು ಮನೋವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯವಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದ್ವಿವೇದಿ ಮತ್ತೊಮ್ಮೆ ಮನೋವಿಜ್ಞಾನ ವಿಭಾಗದ ತಜ್ಞರನ್ನು ಸಂಪರ್ಕಿಸುವಂತೆ ಅವರು ಸಲಹೆ ನೀಡಿದ್ದಾರೆ.


