ಬೆಳಗಾವಿ: ಮುಂಬೈ, ಚನ್ನೈ, ಪುಣೆ, ಸೂರತ್ ನಗರಗಳಿಗೆ ಇಂಡಿಗೋ ವಿಮಾನಯಾನ ಸೇವೆಯನ್ನು ಒದಗಿಸುವಂತೆ ಇಂಡಿಗೋ ಸಂಸ್ಥೆಯ ಮುಖ್ಯಸ್ಥ (ಮಾರಾಟ ವಿಭಾಗ) ಅನಶೂಲ ಸೇಟಿ ಅವರೊಡನೆ ದೂರವಾಣಿಯಲ್ಲಿ ಚರ್ಚಿಸಿದ್ದಾಗಿ ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಮುಂಬೈ ನಗರಕ್ಕೆ ಬೆಳಗಾವಿಯಿಂದ ದಿನನಿತ್ಯ ನೂರಾರು ಜನ ವ್ಯಾಪಾರಸ್ಥರು, ವ್ಯಾಪಾರ ವಹಿವಾಟಕ್ಕೆಂದು ಪ್ರಯಾಣಿಸುತ್ತಿರುತ್ತಾರೆ. ಆದರೆ ಮುಂಬೈ ನಗರಕ್ಕೆ ಸದ್ಯ ಯಾವುದೇ ವಿಮಾನಯಾನ ಸೇವೆ ಲಭ್ಯವಿಲ್ಲ. ಆದ ಕಾರಣ ಬೆಳಗಾವಿಯಿಂದ ಮುಂಬೈ ನಗರಕ್ಕೆ ಇಂಡಿಗೋ ಸಂಸ್ಥೆಯು ವಿಮಾನಯಾನ ಸೇವೆ ಒದಗಿಸಿದ್ದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಚರ್ಚೆಯಲ್ಲಿ ತಿಳಿಸಲಾಯಿತು. ಅದರಂತೆ ಪುಣೆ, ಸೂರತ್, ಚೆನ್ನೈ ಮುಂತಾದ ಪ್ರಮುಖ ನಗರಗಳಿಗೂ ಸಹ ವಿಮಾನ ಸೇವೆ ಒದಗಿಸುವ ಬಗ್ಗೆ ಸಾರ್ವಜನಿಕರಿಂದ ಬೇಡಿಕೆಯಿದ್ದು, ಇದನ್ನು ಸಹ ಪರಿಗಣಿಸುವಂತೆ ಇಂಡಿಗೋ ಸಂಸ್ಥೆಯ ಮುಖ್ಯಸ್ಥರಲ್ಲಿ ಪ್ರಸ್ತಾಪಿಸಲಾಯಿತು.
ಮುಂಬರುವ ದಿನಗಳಲ್ಲಿ ಬೆಳಗಾವಿಯಿಂದ – ಮುಂಬೈ ನಗರಕ್ಕೆ ಇಂಡಿಗೋ ಸಂಸ್ಥೆಯು ವಿಮಾನಯಾನ ಸೇವೆ ಒದಗಿಸುವ ಬಗ್ಗೆ ಸ್ಪಷ್ಟ ಭರವಸೆಯನ್ನು ಇಂಡಿಗೋ ಸಂಸ್ಥೆಯ ಮುಖ್ಯಸ್ಥ ಸೇಟಿ ಅವರು ನೀಡಿದ್ದು ಮತ್ತು ಅದೇ ರೀತಿಯಾಗಿ ಚೆನ್ನೈ, ಪುಣೆ, ಸೂರತ್ ಗಳಂತಹ ಪ್ರಮುಖ ನಗರಗಳಿಗೂ ಈ ಸೇವೆಯನ್ನು ವಿಸ್ತರಿಸುವ ಬಗ್ಗೆ ವಿಷಯ ಅವಲೋಕಿಸುವುದಾಗಿ ಅವರು ಮಾತುಕತೆ ಸಂದರ್ಭದಲ್ಲಿ ವಿವರಿಸಿರುವುದಾಗಿ ಹೇಳಿದ್ದಾರೆ.


