ಖಾನಾಪುರ: ಕಳೆದ ನಾಲ್ಕು ವರ್ಷಗಳಿಂದ ಖಾನಾಪುರದ ದಟ್ಟ ಕಾಡುಗಳ ಮಧ್ಯೆ ಪ್ರತಿ ವರ್ಷ ಕರುನಾಡ ಸಾಹಿತ್ಯ ಸಂಭ್ರಮ ಆಯೋಜಿಸುತ್ತಿರುವ ಕರುನಾಡು ಕನ್ನಡ ಸಂಘವು ಮುಂದಿನ ವರ್ಷದ 5ನೇ ಸಾಹಿತ್ಯ ಸಂಭ್ರಮವನ್ನು ಎರಡು ದಿನಗಳ ಕಾಲ ರಾಜ್ಯಮಟ್ಟದಲ್ಲಿ ಆಯೋಜನೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಜಗದೀಶ ಹೊಸಮನಿ ತಿಳಿಸಿದರು.
ತಾಲೂಕಿನ ಕರಂಬಳ-ಕೌಂದಲ ಮಧ್ಯದ ಸಾಲುಮರದ ತಿಮ್ಮಕ್ಕ ವೃಕ್ಷೋಧಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ 4ನೇ ಕರುನಾಡು ಸಾಹಿತ್ಯ ಸಂಭ್ರಮದ ಸಮಾರೋಪದಲ್ಲಿ ಈ ನಿರ್ಣಯವನ್ನು ಪ್ರಕಟಿಸಿದ ಅವರು, ಖಾನಾಪುರ ಭಾಗದಲ್ಲಿ ಕನ್ನಡ ಕಟ್ಟುವ ಜತೆಗೆ ಕನ್ನಡ ಸಾಹಿತ್ಯದ ಚಟುವಟಿಕೆಗಳನ್ನೂ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಈ ಸಂಭ್ರಮ ಆಯೋಜಿಸುತ್ತ ಬಂದಿದ್ದು, ಧಾರವಾಡ ಸಾಹಿತ್ಯ ಸಂಭ್ರಮದ ಮಾದರಿಯಲ್ಲೇ ಎರಡು ದಿನಗಳ ಸಂಭ್ರಮ ಮುಂದಿನ ವರ್ಷ ರಾಜ್ಯಮಟ್ಟದಲ್ಲಿ ಆಯೋಜಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಹಿರಿಯ ಸಾಹಿತಿ ಡಾ.ಶಿರೀಷ ಜೋಶಿ ಸಮಾರೋಪ ಭಾಷಣದಲ್ಲಿ ಮಾತನಾಡಿ, ಒಂದು ಕಾಲದಲ್ಲಿ ಖಾನಾಪುರ ಭಾಗದಲ್ಲಿ ಕನ್ನಡ ಮಾತನಾಡುವವರನ್ನು ಹುಡುಕುವಂತಹ ಸ್ಥಿತಿ ಇತ್ತು. ಆದರೆ ಇವತ್ತು ಕನ್ನಡ ಸಾಹಿತ್ಯ ಕಾರ್ಯಕ್ರಮಗಳ ಆಯೋಜನೆ ಮಾಡುವ ಮಟ್ಟಿಗೆ ಬೆಳೆವಣಿಗೆಯಾಗಿರುವುದು ಶ್ಲಾಘನೀಯ ಕಾರ್ಯ. ಒಂದೀಡಿ ದಿನ ಜರುಗಿದ ಈ ಸಾಹಿತ್ಯ ಸಂಭ್ರಮ ಉಪನ್ಯಾಸ, ಗೋಷ್ಠಿ, ಹಾಸ್ಯ, ಹರಟೆ, ಕಾವ್ಯ ವಾಚನಗಳ ಮೂಲಕ ಕಾಡಿನ ಮಧ್ಯೆ ಕನ್ನಡ ಕಲರವ ಮೂಡಿಸಿದೆ ಎಂದು ಶ್ಲಾಘಿಸಿದರು.
ಸಮಾರೋಪದಲ್ಲಿ ಹೇಮಾ ಸೋನೊಳ್ಳಿ (ಅಲ್ಲಣ್ಣವರ), ಕಸಾಪ ತಾಲೂಕು ಅಧ್ಯಕ್ಷ ಬಸವಪ್ರಭು ಹಿರೇಮಠ, ಬವರಾಜ ಗೋಡಗೇರಿ, ಪಿ.ಜಿ.ಹಿರೇಮಠ, ಕರುನಾಡು ಸಂಘದ ಉಪಾಧ್ಯಕ್ಷ ಮಂಜುನಾಥ ನಾಯಿಕ, ಡಿ.ಜಿ.ಕಲ್ಯಾಣಿ, ಮಹಾಂತೇಶ ಹೊಸಮನಿ, ಐ.ಬಿ.ಸನದಿ, ಪ್ರಭಾಕರ ಹೆಬ್ಬಾಳಕರ, ಸುರೇಶ ನರಸಣ್ಣವರ, ಎಸ್.ಅರ್.ಹತ್ತಿ, ಎಂ.ಜಿ.ಬೆನಕಟ್ಟಿ, ಸಿ.ಎ.ಜೈ ನಾಪುರ, ಐ. ಬಿ. ವಸ್ತ್ರದ, ರಾಜು ನೀರಲಗಿ, ವಿವೇಕಾನಂದ ಕುರುಗುಂದ ಇತರರಿದ್ದರು.
ಸಮಾರೋಪಕ್ಕೂ ಮುಂಚೆ ಮಧುಕರ ಗುಂಡೇನಟ್ಟಿ ನೇತೃತ್ವದಲ್ಲಿ ಜರುಗಿದ ಹಾಸ್ಯ ಮಿಸಳದಲ್ಲಿ ಜಿ.ಎಸ್.ಸೋನಾರ್, ಅರವಿಂದ ಹುನಗುಂದ, ನವಲಗುಂದ ತಾನಾಜಿ,ಸುಪ್ರಿಯಾ ದೇಶಪಾಂಡೆ ಹಾಸ್ಯ ಪ್ರಸಂಗ ಹೇಳಿ, ಪ್ರೇಕ್ಷಕರನು ನಗೆಗಡಲಿನಲ್ಲಿ ತೇಲಿಸಿದರು. ಸಂಧ್ಯಾ ಜೋಶಿ ತಮ್ಮ ಏಕಪಾತ್ರಾಭಿನಯದಲ್ಲಿ ಅಭಿನೇತ್ರಿ, ಗೃಹಿಣಿ, ಭಿಕ್ಷುಕ, ಬೆಣ್ಣೆ ಮಾರುವ ವೃದ್ಧೆ, ಸೆಲ್ಸ್ ಮ್ಯಾನ್ಗಳ ಪಾತ್ರಗಳನ್ನು ಹಾಸ್ಯಭರಿತವಾಗಿ ಪ್ರದರ್ಶಿಸಿ ಗಮನ ಸೆಳೆದರು.


