ಖಾನಾಪುರ: ಕೃತಕ ಬುದ್ಧಿಮತ್ತೆಯ ಚಮತ್ಕಾರಗಳಿಗೆ ನಾವಿಂದು ಅಚ್ಚರಿ ಪಟ್ಟು ಕುತೂಹಲದಿಂದ ನೋಡುತ್ತಿರಬಹುದು. ಆದರೆ ಇಂದು ನೋಡಲು ಚಂದವೆಣಿಸುವ ಈ ಎಐ ಭವಿಷ್ಯದಲ್ಲಿ ಸೃಷ್ಟಿಸಬಲ್ಲ ದುಷ್ಪರಿಣಾಮಗಳನ್ನು ಎದುರಿಸಲು ನಾವು ಈಗಿನಿಂದಲೇ ಸನ್ನದ್ಧವಾಯಬೇಕಾದ ಅನಿವಾರ್ಯತೆ ಇದೆ ಎಂದು ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಹೇಳಿದರು.
ಕರುನಾಡ ಕನ್ನಡ ಸಂಘದಿಂದ ತಾಲೂಕಿನ ಕರಂಬಲ-ಕೌಂದಲ ಮಧ್ಯದ ಸಾಲುಮರದ ತಿಮ್ಮಕ್ಕ ವೃಕ್ಷೋದಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ 4ನೇ ಕರುನಾಡ ಸಾಹಿತ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇವತ್ತು ಎಐ ಸಹಾಯದಿಂದ
ಯಾರು ಬೇಕಾದವರು ಯಾರ ಬಗ್ಗೆನಾದರೂ ಏನೂ ಬೇಕಾದನ್ನು ಸೃಷ್ಟಿಸಬಹುದಾದ ಕೆಟ್ಟ ಕಾಲದಲ್ಲಿ ನಾವಿದ್ದೇವೆ. ಹೀಗಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತ ಹೊರಟಿದ್ದು, ಇದನ್ನು ಉಳಿಸಲು ಇವತ್ತು ಸಮಾಜದ ಸಾಹಿತ್ಯದತ್ತ ಹೆಚ್ಚು ಒಲವು ತೋರಿಸಬೇಕಿದೆ ಎಂದರು.
ಈಚೆಗೆ ಚಿಕ್ಕಮಕ್ಕಳಲ್ಲೂ ಅಹಂಕಾರ ಹೆಚ್ಚಾಗಿದೆ. ಅಪ್ರಾಪ್ತರು, ಎರಡ್ಮೂರು ಜನ ಒಂದೇ ಬೈಕ್ ಎಗ್ಗಿಲ್ಲದೇ ಓಡಾಡುತ್ತಿದ್ದಾರೆ. ಈ ಮಕ್ಕಳಿಗೆ ಹೆದರಿಕೆ ನಾಚಿಕೆ ಎರಡೂ ಇಲ್ಲ. ಹಿರಿಯರು ಬೀದಿಯಲ್ಲಿ ಓಡಾಡುವುದು ಕಠಿಣವಾಗಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸವಾಗಬೇಕಿದೆ. ಏಕೆಂದರೆ ಇಂತಹ ಮಕ್ಕಳ ಕೈಗೆ ಮುಂದೆ ಎಐ ಸಿಕ್ಕಾಗ ಏನಾಗಬಹುದು ಊಹಿಸಿ ಎಂದ ಅವರು, ಇಂದು ಸಂಸ್ಕೃತಿಯ ಮೇಲೆ ದೊಡ್ಡ ದಾಳಿಯಾಗುತ್ತಿದೆ.ಬಎಲ್ಲ ಇದ್ದು ಇಂದು ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ. ನೆಮ್ಮದಿಗಾಗಿ ಇಂದು ಸಾಹಿತ್ಯ ಓದುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಇವತ್ತು ಓದುಗರ ಸಂಖ್ಯೆ ಕಡಿಮೆಯಾದಂತೆ ಬರೆಯುವವರ ಸಂಖ್ಯೆಯೂ ಕ್ಷಿಣಿಸಿದೆ. ಇದು ರಾಜ್ಯದ ಮಟ್ಟಿಗೆ ಒಳ್ಳೆಯ ಬೆಳವಣಿಗೆಯಲ್ಲ. ಅಕ್ಷರ ಮತ್ತು ಸಾಹಿತ್ಯದಲ್ಲಿಯೇ ನಮ್ಮ ನಾಡಿನ ಅಂತಸತ್ವ ಅಡಗಿದ್ದು, ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಮಹಿಳೆಯರ ಮೇಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಂದಿನ ದಿನಗಳಲ್ಲಿ ನಾವು ಕಳೆದುಕೊಳ್ಳುತ್ತಿದ್ದೇವೆ. ವೈಚಾರಿಕತೆ ಬಗ್ಗೆ ಬರೆಯುವವರು, ಮಾತನಾಡುವವರನ್ನು ದ್ರೋಹಿಗಳಂತೆ ನೋಡುತ್ತಿದ್ದಾರೆ. ಅಂಥವರ ಸುತ್ತ ಭಯದ ವಾತಾವರಣ ಸೃಷ್ಟಿಯಾಗಿದೆ. ಸಾಹಿತಿಗೆ ತಾನು ಬರೆದ ಸಾಹಿತ್ಯ ಸತ್ಯವಿದೆಯೆಂದು ಸಮರ್ಥಿಸಿಕೊಂಡು ಅದನ್ನು ಜೀರ್ಣಿಸಿಕೊಳ್ಳಬೇಕೆಂಬ ಹೃದಯವಿರಬೇಕು. ಆಗ ಮಾತ್ರ ಸಾಹಿತ್ಯದಿಂದ ನಮ್ಮಸಮಾಜ ಉಳಿಯಲು ಸಾಧ್ಯ.ವಚನ ಸಾಹಿತ್ಯ ಕರ್ನಾಟಕದ ಹೃದಯವಿದ್ದಂತೆ. ಆದರೆ ಈ ಹೃದಯಕ್ಕೆ ಧಕ್ಕೆ ಮಾಡುವ ಕೆಲಸಗಳು ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಪ್ರೊ.ವಿಜಯಲಕ್ಷ್ಮಿ ಪುಟ್ಟಿ, ಬಿಇಒ ಪಿ.ರಾಮಪ್ಪ, ಸಂತೋಷ ಹಂಜಿ, ನ್ಯಾಯವಾದಿ ಆರ್.ಎನ್. ಪಾಟೀಲ, ಬಸವರಾಜ ಗಾರ್ಗಿ, ಎಚ್.ಬಿ. ಕೋಲಕಾರ, ಡಾ.ಪಿ.ಜಿ. ಕೆಂಪಣ್ಣವರ, ಪ್ರೊ. ಶಶಿಕಾಂತ ತಾರದಾಳೆ ಇತರರು ವೇದಿಕೆಯಲ್ಲಿದ್ದರು.
ಸಂಘದ ಅಧ್ಯಕ್ಷ ಜಗದೀಶ ಹೊಸಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಕುರುಗುಂದ ನಿರೂಪಿಸಿದರು.
ಉದ್ಘಾಟನೆ ಬಳಿಕ ಕರ್ನಾಟಕ ಮಹಾರಾಷ್ಟ್ರ ಸಾಂಸ್ಕೃತಿಕ ಬಾಂಧವ್ಯ, ಕನ್ನಡ ನಾಡು ನುಡಿಗೆ ಸಾಹಿತಿಗಳ ಕೊಡುಗೆ ಕುರಿತು ಸಂಕೀರ್ಣಗೋಷ್ಠಿ, ನಗೆಗೋಷ್ಠಿ, ಉಪನ್ಯಾಸಗಳು ಜರುಗಿದವು.


