ಬೆಳಗಾವಿ : ಐದು ವರ್ಷಗಳ ಕಾಲ ಪ್ರೀತಿ- ಪ್ರೇಮ ಎಂದು ನಟನೆ ಮಾಡಿದ್ದ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ, ನಿನ್ನನ್ನೇ ನಾನು ಮದುವೆಯಾಗುತ್ತೇನೆ ಎಂದು ಪುಸಲಾಯಿಸಿ ಅತ್ಯಾಚಾರ ಎಸಗಿದ ವ್ಯಕ್ತಿಗೆ ಇಲ್ಲಿಯ 8 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ 10 ವರ್ಷ ಜೈಲು ಶಿಕ್ಷೆ, ರೂ. 10,000 ದಂಡ ವಿಧಿಸಿ, ಕಲಂ 420 ಐಪಿಸಿ ಅಪರಾಧಕ್ಕಾಗಿ 3 ವರ್ಷ ಜೈಲು ಶಿಕ್ಷೆ, ರೂ. 5,000 ದಂಡ, ಕಲಂ 506 ಐಪಿಸಿ ಅಪರಾಧಕ್ಕೆ 6 ತಿಂಗಳ ಜೈಲು ಶಿಕ್ಷೆ, ರೂ.5,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಧನಪಾಲ ಕ್ಯಾಮನ್ನವರ ಶಿಕ್ಷೆಗೊಳಗಾದ ಆರೋಪಿ. ಈತ ಮತ್ತು ದೂರುದಾರ ಮಹಿಳೆ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿ ರಜೆ ಮೇಲೆ ಊರಿಗೆ ಬಂದಾಗ ಇಬ್ಬರು ಸುತ್ತಾಡುತ್ತಿದ್ದರು. 2022 ರ ಏಪ್ರಿಲ್ 8 ರಂದು ಸಂಜೆ 7 ಗಂಟೆ ಸುಮಾರಿಗೆ ಆರೋಪಿ ಮಹಿಳೆಯನ್ನು ಪುಸಲಾಯಿಸಿ ಅಮಟೂರು ಗ್ರಾಮದ ಹರಿಜನಕೇರಿಗೆ ಹೊಂದಿಕೊಂಡ ದಕ್ಷಿಣ ಬದಿಯ ಅಮಟೂರ-ಬೇವಿನಕೊಪ್ಪ ರಸ್ತೆ ಬಳಿ ಜಮೀನಿಗೆ ಕರೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ನಡೆಸಿದ್ದ. ಆಗ ದೂರುದಾರ ಮಹಿಳೆ ಇದು ಸರಿ ಅಲ್ಲ, ಇನ್ನು ನಮ್ಮಿಬ್ಬರದ್ದು ಮದುವೆಯಾಗಿರುವುದಿಲ್ಲ ಎಂದು ಹೇಳಿದರೂ ಆರೋಪಿ ಅವಳ ಮಾತು ಕೇಳದೆ ದೈಹಿಕ ಸಂಪರ್ಕ ನಡೆಸಿದ್ದ. ಅಲ್ಲದೆ ಆರೋಪಿ ರಜೆ ಮೇಲೆ ಊರಿಗೆ ಬಂದಾಗ ಪದೆ ಪದೇ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿದ್ದ. ನಂತರ ಮಹಿಳೆ ಆರೋಪಿಗೆ ನನ್ನನ್ನು ಮದುವೆ ಮಾಡಿಕೋ ಎಂದು ಹಲವು ಬಾರಿ ಹೇಳಿದರೂ ಆತ ಅವಳ ಮಾತಿಗೆ ಬೆಲೆ ಕೊಡದೆ ನೀನು ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನಗೆ ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ನಡೆಸಿ ಮದುವೆ ಮಾಡಿಕೊಳ್ಳದ ಮೋಸ ಮಾಡಿದ ಆರೋಪಿ, ಶಿಕ್ಷಾರ್ಹ ಅಪರಾಧ ಎಸಗಿದ್ದಾನೆ. ಈ ಬಗ್ಗೆ ಪ್ರಕರಣದ ವಿಚಾರಣೆ ನಡೆಸಿದ 8 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಪುತ್ರ ದಿಂಡಲಕೊಪ್ಪ ಅವರು, ಆರೋಪ ಸಾಬೀತಾಗಿರುವುದರಿಂದ ಆರೋಪಿ ನಾಗರಾಜ ಧನಪಾಲ ಕ್ಯಾಮನ್ನವರನಿಗೆ 2025 ರ ಡಿಸೆಂಬರ್ 22ರಂದು ಶಿಕ್ಷೆ ಪ್ರಮಾಣ ನಿಗದಿಪಡಿಸಿ ತೀರ್ಪು ಪ್ರಕಟಿಸಿ, ಸಂತ್ರಸ್ತಗೆ ಪರಿಹಾರ ನೀಡಲು ಸೂಚಿಸಿದ್ದಾರೆ. ಸರಕಾರದ ಪರವಾಗಿ 8 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ಕಿರಣ್ ಎಸ್. ಪಾಟೀಲ ವಾದ ಮಂಡಿಸಿದ್ದರು. ಅಧಿಕಾರಿಗಳಾದ ಕೆ.ಜಿ.ದೀಪು ಮತ್ತು ಶಿವಶಂಕರ ಆರ್. ಗಣಾಚಾರಿ, ಆರಕ್ಷಕ ವೃತ್ತ ನಿರೀಕ್ಷಕರು, ಬೈಲಹೊಂಗಲ ತನಿಖೆ ಕೈಗೊಂಡಿದ್ದರು.


