ಬೆಳಗಾವಿ: ಬೆಳಗಾವಿ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಅಪ್ಪಣ್ಣ ಪೂಜಾರ (61)ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಗೋಕಾಕ ತಾಲೂಕು ಮಸರಗುಪ್ಪಿ ಗ್ರಾಮದವರಾದ ಅಪ್ಪಣ್ಣ ಪೂಜಾರ ಅವರು ಕಳೆದ 32 ವರ್ಷಗಳಿಂದ ಆರ್ಎಲ್ಎಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸರಳ ಸಜ್ಜನಿಕೆ, ನಯ-ವಿನಯ ವ್ಯಕ್ತಿತ್ವದ ಅವರು ಅಪಾರ ಸ್ನೇಹಿತ ಬಳಗದ ಜೊತೆಗೆ ಒಡನಾಟ ಹೊಂದಿದ್ದರು.
ಅಪ್ಪಣ್ಣ ಪೂಜಾರ್ ಅವರ ನಿಧನಕ್ಕೆ ಆರ್ ಎ ಲ್ಎಸ್ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.
ಎಸ್.ವಿ.ದಳವಾಯಿ ಸಂತಾಪ: ನನ್ನ ಸಹೋದ್ಯೋಗಿ ಮಿತ್ರ ಪ್ರೊ.ಅಪ್ಪಣ್ಣ ಪೂಜಾರ್ ನಮ್ಮನ್ನು ಅಗಲಿದ ಸುದ್ದಿ ತಿಳಿಸಲು ವಿಷಾದವೆನಿಸುತ್ತಿದೆ. ಸ್ಫುರದ್ರೂಪಿ ಹಾಗೂ ಸ್ನೇಹಮಯಿ ಸ್ವಭಾವದ ಅಪ್ಪಣ್ಣ ತನ್ನ ಸಂಪರ್ಕಕ್ಕೆ ಬರುವ ಎಲ್ಲರನ್ನೂ ಒಪ್ಪಿಕೊಳ್ಳುತ್ತಿದ್ದರು ಮತ್ತು ಅಪ್ಪಿಕೊಳ್ಳುತ್ತಿದ್ದರು. ಪರರನ್ನು ನಿಂದಿಸುವ, ದ್ವೇಷಿಸುವ ಮಾತುಗಳನ್ನು ಅವರಿಂದ ನಾವೆಂದೂ ಕೇಳಲಿಲ್ಲ. ಸದಾ ಹಸನ್ಮುಖಿ. ಯಾರಿಗೂ ಕೇಡನ್ನು ಬಯಸದವ. RLS
ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಎಲ್ಲರೂ ಮೆಚ್ಚುವಂತೆ ಸೇವೆ ಸಲ್ಲಿಸಿ ವರ್ಷದ ಹಿಂದಷ್ಟೇ ನಿವೃತ್ತಿ ಪಡೆದ ಅಪ್ಪಣ್ಣ ಪೂಜಾರ್ ಇಷ್ಟು ಬೇಗ ನಮ್ಮನ್ನು ಅಗಲಿದ್ದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅವರ ಆಪ್ತ ಸ್ನೇಹಿತರು ಹಾಗೂ ಆರ್ ಎಲ್ ಎಸ್ ಭೌತಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಎಸ್.ವಿ. ದಳವಾಯಿ ಅವರು ಕಂಬನಿ ಮಿಡಿದಿದ್ದಾರೆ.


