ನವದೆಹಲಿ: ರೈಲ್ವೆ ಇಲಾಖೆಯು ಡಿಸೆಂಬರ್ 26 ರಿಂದ ಜಾರಿಗೆ ಬರುವಂತೆ ಪ್ರಯಾಣ ದರವನ್ನು ಹೆಚ್ಚಿಸಿದೆ. ಉಪನಗರ ರೈಲು ಪ್ರಯಾಣದ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲವಾದರೂ, ಸುದೀರ್ಘ ಪ್ರಯಾಣದ ದರಗಳು ಏರಿಕೆಯಾಗಲಿವೆ.
ಸಾಮಾನ್ಯ ದರ್ಜೆ 215 ಕಿ.ಮೀ ವರೆಗಿನ ಪ್ರಯಾಣಕ್ಕೆ ದರದಲ್ಲಿ ಏರಿಕೆ ಇಲ್ಲ. ಆದರೆ 215 ಕಿ.ಮೀ ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ಪ್ರತಿ ಕಿ.ಮೀ ಗೆ 1 ಪೈಸೆ ಹೆಚ್ಚಳವಾಗಲಿದೆ.
ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳಲ್ಲಿ, ನಾನ್-ಎಸಿ ಮತ್ತು ಎಸಿ ಎರಡರಲ್ಲೂ, ಪ್ರತಿ ಕಿಲೋಮೀಟರ್ಗೆ 2 ಪೈಸೆ ಹೆಚ್ಚಳವಾಗಲಿದೆ. ಇದರರ್ಥ, ನಾನ್-ಎಸಿ ಬೋಗಿಗಳಲ್ಲಿ 500 ಕಿ.ಮೀ ಪ್ರಯಾಣಿಸುವ ಪ್ರಯಾಣಿಕರು ಇನ್ನು ಮುಂದೆ 10 ರೂ. ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.
ಉಪನಗರ ರೈಲು ಸೇವೆಗಳು ಅಥವಾ ಮಾಸಿಕ ಟಿಕೆಟ್ಗಳ ದರದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದರ ಏರಿಕೆಯಿಂದಾಗಿ ರೈಲ್ವೆ ಇಲಾಖೆಗೆ ವಾರ್ಷಿಕ ಸುಮಾರು 600 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ.
ಈ ಬೆಲೆ ಏರಿಕೆ ಏಕೆ ?
ಕಳೆದ ಒಂದು ದಶಕದಲ್ಲಿ ರೈಲ್ವೆ ಜಾಲ ಮತ್ತು ಕಾರ್ಯಾಚರಣೆ ವಿಸ್ತರಿಸಿದ್ದು, ಸಿಬ್ಬಂದಿ ವೆಚ್ಚ ಗಣನೀಯವಾಗಿ ಹೆಚ್ಚಿದೆ ಎಂದು ಇಲಾಖೆ ತಿಳಿಸಿದೆ. 2024-25ರ ಹಣಕಾಸು ವರ್ಷದಲ್ಲಿ ಸಿಬ್ಬಂದಿ ವೆಚ್ಚ 1,15,000 ಕೋಟಿ ರೂ.ಗಳಿಗೆ ಏರಿದ್ದರೆ, ಪಿಂಚಣಿ ವೆಚ್ಚ 60,000 ಕೋಟಿ ರೂ. ತಲುಪಿದೆ. ಒಟ್ಟಾರೆ ಕಾರ್ಯಾಚರಣೆಯ ವೆಚ್ಚ 2,63,000 ಕೋಟಿ ರೂ.ಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.


