ಬೆಂಗಳೂರು: ಸರ್ಕಾರಿ ನೌಕರರು ಸಭ್ಯ ಉಡುಪು ಧರಿಸುವಂತೆ ಸರ್ಕಾರ ಆದೇಶ ಮಾಡಿದೆ. ಸಭ್ಯ ಉಡುಪು ಧರಿಸದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಸರ್ಕಾರ ಖಡನ್ ಸೂಚನೆ ಮಾಡಿದೆ.
ಕಚೇರಿ ಸಮಯದಲ್ಲಿ ಅನಧಿಕೃತವಾಗಿ ಹೊರ ಹೋಗುವವರನ್ನು ಮೇಲಾಧಿಕಾರಿಗಳು ನಿಯಂತ್ರಿಸಲು ಸೂಚಿಸಲಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಕಡ್ಡಾಯವಾಗಿ ಸಕಾರಣ ನೀಡಿ ಹೊರಗೆ ಹೋಗುವಂತೆ ತಿಳಿಸಿದೆ.
ಸಿಬ್ಬಂದಿ ಆಡಳಿತ ಮತ್ತು ಸುಧಾರಣಾ ಇಲಾಖೆ ವಿವಿಧ ಇಲಾಖೆಗಳ ಮುಖ್ಯಸ್ಥರು, ಉಪ ಆಯುಕ್ತರು, ಮುಖ್ಯಮಂತ್ರಿ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರರಿಗೆ ಈ ಸಂದೇಶವನ್ನು ಕಳುಹಿಸಿದ್ದು, ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಪಟ್ಟಿ ಮಾಡಿದೆ.
ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕೆಲವು ನೌಕರರು ಅಸಭ್ಯವಾಗಿ ಬಟ್ಟೆ ಧರಿಸುತ್ತಾರೆ ಎಂದು ಸಾರ್ವಜನಿಕರು ಮತ್ತು ಕೆಲವು ಸಂಸ್ಥೆಗಳಿಂದ ಡಿಪಿಎಆರ್ ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ನೌಕರರಿಗೆ ಸಭ್ಯವಾಗಿ ಬಟ್ಟೆಗಳನ್ನು ಧರಿಸಲು ಹೇಳಲಾಗಿದ್ದರೂ, ಅನೇಕರು ಸೂಚನೆಗಳನ್ನು ಪಾಲಿಸುತ್ತಿಲ್ಲ. ಈ ವಿಷಯವನ್ನು ಅದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಸುತ್ತೋಲೆ ತಿಳಿಸಿದೆ.


