ಸೊಲ್ಲಾಪುರ : ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬೋರಮಣಿ ಹುಲ್ಲುಗಾವಲು ಪ್ರದೇಶದಲ್ಲಿ ಅಪರೂಪದ ಮತ್ತು ಬೃಹತ್ ಗಾತ್ರದ ಪ್ರಾಚೀನ ಕಲ್ಲಿನ ಚಕ್ರವ್ಯೂಹದ ಮಾದರಿಯ ಸುರುಳಿಯಾಕಾರದ ವಿಶಿಷ್ಟ ರಚನೆಯೊಂದು ಪತ್ತೆಯಾಗಿದೆ. ಇದು ಭಾರತದಲ್ಲಿ ಇದುವರೆಗೆ ದಾಖಲಾದ ಅತಿದೊಡ್ಡ ವೃತ್ತಾಕಾರದ ಕಲ್ಲಿನ ಚಕ್ರವ್ಯೂಹ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬೋರಮಣಿ ಹುಲ್ಲುಗಾವಲು ಸಫಾರಿ ಅಭಯಾರಣ್ಯದಲ್ಲಿ ಈ ರಚನೆ ಪತ್ತೆಯಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸುಮಾರು 50 ಅಡಿ x 50 ಅಡಿ ಅಳತೆಯ 15-ಸುತ್ತುಗಳ ಚಕ್ರವ್ಯೂಹವನ್ನು ಹೊಂದಿದೆ. ಇದನ್ನು ಮೊದಲು ಬೋರಮಣಿ ಹುಲ್ಲುಗಾವಲು ಸಫಾರಿ ಅಭಯಾರಣ್ಯದಲ್ಲಿ ಕೆಲಸ ಮಾಡುತ್ತಿರುವ ನೇಚರ್ ಕನ್ಸರ್ವೇಶನ್ ಸರ್ಕಲ್ ಎಂಬ ಎನ್ಜಿಒ ಸದಸ್ಯರು ಗುರುತಿಸಿದರು.
ವನ್ಯಜೀವಿಗಳನ್ನು ಮೇಲ್ವಿಚಾರಣೆ ಮಾಡುವಾಗ, ಅವರು ಅಸಾಮಾನ್ಯ ಕಲ್ಲಿನ ರಚನೆಯನ್ನು ಗಮನಿಸಿ ಪುರಾತತ್ತ್ವಜ್ಞರಿಗೆ ಮಾಹಿತಿ ನೀಡಿದರು. ನಂತರ ಇದನ್ನು ಪುಣೆಯ ಡೆಕ್ಕನ್ ಕಾಲೇಜಿನ ಪುರಾತತ್ವಶಾಸ್ತ್ರಜ್ಞ ಸಚಿನ್ ಪಾಟೀಲ್ ಗುರುತಿಸಿದರು. ಈ ರಚನೆಯು ಸುಮಾರು 2,000 ವರ್ಷಗಳ ಹಿಂದಿನದು ಎಂದು ಅವರು ನಂಬುತ್ತಾರೆ.
ಐತಿಹಾಸಿಕ ಮತ್ತು ವಾಣಿಜ್ಯ ಮಹತ್ವ:
ಈ ಸಂಶೋಧನೆಯು ಪ್ರಾಚೀನ ಕಾಲದ ಅಂತಾರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಮೇಲೆ ಬೆಳಕು ಚೆಲ್ಲುತ್ತದೆ. ಪುರಾತತ್ವಶಾಸ್ತ್ರಜ್ಞರ ಪ್ರಕಾರ, ಅಂದಿನ ಕಾಲದ ‘ತೇರ್’ (ಇಂದಿನ ಧಾರಾಶಿವ ಜಿಲ್ಲೆ) ಪ್ರದೇಶವು ರೋಮ್ ಸಾಮ್ರಾಜ್ಯದೊಂದಿಗೆ ಬಲವಾದ ವ್ಯಾಪಾರ ಸಂಬಂಧವನ್ನು ಹೊಂದಿತ್ತು ಎಂಬುದಕ್ಕೆ ಇದು ಪುರಾವೆ ಒದಗಿಸುತ್ತದೆ. ಆ ಕಾಲದಲ್ಲಿ ವಿದೇಶಿ ವರ್ತಕರು ಇಲ್ಲಿನ ಸಾಂಬಾರ ಪದಾರ್ಥಗಳು, ರೇಷ್ಮೆ ಮತ್ತು ಇಂಡಿಗೋ ಬಣ್ಣದ ಬದಲಾಗಿ ಚಿನ್ನ, ವೈನ್ ಮತ್ತು ಬೆಲೆಬಾಳುವ ಆಭರಣದ ಕಲ್ಲುಗಳನ್ನು ವ್ಯಾಪಾರ ಮಾಡುತ್ತಿದ್ದರು.
ಜಾಗತಿಕ ಗಮನ ಸೆಳೆದ ಸೊಲ್ಲಾಪುರ:
ಈ ಅಪರೂಪದ ಚಕ್ರವ್ಯೂಹದ ಕುರಿತಾದ ವಿವರಗಳು ಬ್ರಿಟನ್ ಮೂಲದ ಅಂತಾರಾಷ್ಟ್ರೀಯ ಜರ್ನಲ್ ‘ಕ್ಯಾರ್ಡ್ರೊಯಿಯಾ’ ದ 2026ರ ಆವೃತ್ತಿಯಲ್ಲಿ ಪ್ರಕಟವಾಗಲಿವೆ. ಈ ಕುರಿತು ಮಾತನಾಡಿರುವ ಜರ್ನಲ್ ಎಡಿಟರ್ ಜೆಫ್ ಸಾವರ್ಡ್, “ಇದು ಶಾಸ್ತ್ರೀಯ ಶೈಲಿಯ ಸುರುಳಿಯಾಕಾರದ ತೊಡಕಿನ ದಾರಿಯಾಗಿದ್ದರೂ, ಇದರ ಮಧ್ಯಭಾಗದಲ್ಲಿರುವ ಸುರುಳಿಯಾಕಾರವು ಭಾರತಕ್ಕೆ ಮಾತ್ರ ಸೀಮಿತವಾದ ವಿಶಿಷ್ಟ ಲಕ್ಷಣವಾಗಿದೆ. ಅದನ್ನು ಭಾರತದಲ್ಲಿ ಚಕ್ರವ್ಯೂಹ ಎಂದು ಕರೆಯುತ್ತಾರೆ ಎಂದು ತಿಳಿಸಿದ್ದಾರೆ.
ದಾಖಲೆ ಏನು ಹೇಳುತ್ತದೆ?
ಇಲ್ಲಿಯವರೆಗೆ ಭಾರತದಲ್ಲಿ ಪತ್ತೆಯಾಗಿದ್ದ ಅತಿದೊಡ್ಡ ವೃತ್ತಾಕಾರದ ಚಕ್ರವ್ಯೂಹವು ಕೇವಲ 11 ಸುತ್ತುಗಳನ್ನು ಮಾತ್ರ ಹೊಂದಿತ್ತು. ತಮಿಳುನಾಡಿನ ಗೆಡಿಮೇಡುವಿನಲ್ಲಿ ಇದಕ್ಕಿಂತ ದೊಡ್ಡದಾದ ಚದರ ಆಕಾರದ ಚಕ್ರವ್ಯೂಹವಿದ್ದರೂ, ವೃತ್ತಾಕಾರದ ರಚನೆಗಳಲ್ಲಿ ಸೊಲ್ಲಾಪುರದ ಈ ಚಕ್ರವ್ಯೂಹವೇ ಭಾರತದಲ್ಲಿ ನಂ.1 ಸ್ಥಾನ ಪಡೆದಿದೆ. ಗಾತ್ರದಲ್ಲಿ ಒಟ್ಟಾರೆಯಾಗಿ ಎರಡನೇ ಸ್ಥಾನದಲ್ಲಿದೆ.


