ಬೆಳಗಾವಿ :
ಬೆಳಗಾವಿಯ ಪೋಕ್ಸೊ ನ್ಯಾಯಾಲಯ ಶುಕ್ರವಾರ ಮತ್ತೊಂದು ಪ್ರಕರಣದಲ್ಲಿ ಆರೋಪಿ ಮೇಲಿನ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದು ಕೃತ್ಯ ನಡೆಸಿದ ನಕಲಿ ಸ್ವಾಮೀಜಿಯ ಮುಖವಾಡ ಈಗ ಕಳಚಿ ಬಿದ್ದಿದೆ.
ನಿಮ್ಮ ಮನೆಗೆ ಬಿಡುತ್ತೇನೆ ಎಂದು ಅಪ್ರಾಪ್ರ ಬಾಲಕಿಯನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಮಹಾಸ್ವಾಮಿಯೊಬ್ಬರ ಮೇಲಿನ ಆರೋಪ ಸಾಬೀತಾಗಿದೆ ಎಂದು ಶುಕ್ರವಾರ ಬೆಳಗಾವಿಯ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದ್ದು, ಶಿಕ್ಷೆಯನ್ನು ಶನಿವಾರ ಪ್ರಕಟ ಮಾಡಲಿದೆ.
ರಾಯಬಾಗ ತಾಲೂಕು ಮೇಖಳಿ ಗ್ರಾಮದ ಶ್ರೀ ಹಠಯೋಗಿ ಲೋಕೇಶ್ವರ ಮಹಾಸ್ವಾಮಿ /ಲೋಕೇಶ್ವರ ಸಾಬಣ್ಣ ಜಂಬಗಿ (30) ಆರೋಪಿ.
ಬಾಲಕಿ ಅಪ್ರಾಪ್ತೆ ಎಂದು ಗೊತ್ತಿದ್ದರೂ 2025 ರ ಮೇ 13 ರಂದು ತನ್ನ ಕಾರಿನಲ್ಲಿ ಆಕೆಯನ್ನು ಬರಲು ಹೇಳಿ, ನಿಮ್ಮ ಮನೆಗೆ ಹೋಗುತ್ತಿದ್ದೇನೆ. ನೀನು ಬಾ, ನಿಮ್ಮ ಮನೆಗೆ ಬಿಡುತ್ತೇನೆ ಎಂದು ಬಾಲಕಿಯನ್ನು ಹತ್ತಿಸಿಕೊಂಡು ಅಪಹರಣ ಮಾಡಿಕೊಂಡು ಮಹಾಲಿಂಗಪುರ ಮಾರ್ಗವಾಗಿ ಬಾಗಲಕೋಟೆಗೆ ಹೋಗಿ ಅಲ್ಲಿಂದ ಆಂಧ್ರಪ್ರದೇಶದ ಮಂತ್ರಾಲಯಕ್ಕೆ ತೆರಳಿದ್ದಾನೆ. ಅಲ್ಲಿನ ಲಾಡ್ಜ್ ನಲ್ಲಿ ಮೇ 14 ರಂದು ರೂಮ್ ಬುಕ್ ಮಾಡಿ ಬಾಲಕಿ ಮೇಲೆ ಒತ್ತಾಯ ಪೂರ್ವಕವಾಗಿ ಲೈಂಗಿಕ ಅತ್ಯಾಚಾರ ಮಾಡಿದ್ದಾನೆ.
ಅಲ್ಲಿಂದ ಬಾಗಲಕೋಟೆ ಜಿಲ್ಲೆಗೆ ಮೇ 16 ರಂದು ಬಂದು ಲಾಡ್ಜ್ ನಲ್ಲಿ ರೂಮ್ ಬುಕ್ ಮಾಡಿ ಅಲ್ಲಿಯೂ ಅತ್ಯಾಚಾರ ಮಾಡಿದ್ದಾನೆ. ನಂತರ ಕಾರಿನಲ್ಲಿ ಮಹಾಲಿಂಗಪುರದ ಬಸ್ ನಿಲ್ದಾಣದಲ್ಲಿ ಇಳಿಸಿ, ನಿಮ್ಮ ಮನೆಗೆ ಹೋಗು ಎಂದು ಹೇಳಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಾಖಲಾಧಿಕಾರಿ ರಾಜು ಪ್ರಕರಣ ದಾಖಲಿಸಿ ಕೊಂಡಿದ್ದರು. ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೋಡ ಮುಂದಿನ ತನಿಖೆ ಕೈಗೊಂಡಿದ್ದರು.
ಬಾಲಕಿಯನ್ನು ಅಪಹರಣ ಮಾಡಿದ ಕೃತ್ಯದ ಸಿಸಿ ಕ್ಯಾಮೆರಾ ದೃಶ್ಯಾವಳಿ ಕಂಡುಬಂದಿದೆ. ಮುಂದಿನ ತನಿಖೆಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಪ್ರಕರಣದ ವಿಚಾರಣೆ ಮಾಡಿದ್ದರು. ಈ ಬಗ್ಗೆ ಶ್ರೀ ಹಠಯೋಗಿ ಲೋಕೇಶ್ವರ ಮಹಾಸ್ವಾಮಿ ಮೇಲಿನ ಆರೋಪಣೆ ಸಾಬೀತಾಗಿವೆ ಎಂದು ಅವರು ತೀರ್ಪು ನೀಡಿದ್ದು ಶಿಕ್ಷೆಯ ಪ್ರಮಾಣವನ್ನು ಡಿಸೆಂಬರ್ 20 ಕ್ಕೆ ಆದೇಶಿಸಲು ಮುಂದೂಡಲಾಗಿದೆ. ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ. ಪಾಟೀಲ ಸರಕಾರದ ಪರವಾಗಿ ವಾದ ಮಂಡಿಸಿದ್ದರು.


