ಬೆಳಗಾವಿ: ಬೆಳಗಾವಿಯ ಕೆಎಲ್ ಇ ಸಂಸ್ಥೆಯ ಜಿ.ಎ. ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟಕ್ಕೆ ಲಿಂಗರಾಜ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮರಾವ್ ಶುಕ್ರವಾರ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆ ಎನ್ನುವುದು ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬರು ಉತ್ಸಾಹದಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯ ಸಿ.ಪಿ. ದೇವರುಷಿ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದು ಅತ್ಯಂತ ಮುಖ್ಯ. ಇದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಬರಬಹುದು. ಯಾರು ನಿರಾಶೆ ಪಡಬೇಕಾಗಿಲ್ಲ. ಒಟ್ಟಾರೆಯಾಗಿ ಭಾಗವಹಿಸುವಿಕೆ ಎನ್ನುವುದು ಅತ್ಯಂತ ಮುಖ್ಯವಾಗಿದೆ ಎಂದು ಪ್ರತಿಪಾದಿಸಿದರು.
ಕ್ರೀಡೆಗಳಲ್ಲಿ ಪರಿಶ್ರಮ ಮತ್ತು ತಾಳ್ಮೆ ಅತ್ಯಂತ ಪ್ರಮುಖವಾಗಿರುತ್ತದೆ. ಪರಿಶ್ರಮದಿಂದ ಪ್ರಯತ್ನಿಸಿದರೆ ಗೆಲುವು ಸುಲಭ ಸಾಧ್ಯವಾಗುತ್ತದೆ. ಜೊತೆಗೆ ತಾಳ್ಮೆಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.
ಶ್ರೀನಿಧಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎಸ್. ಎಸ್. ಹಲವಾಯಿ ಪ್ರಾಸ್ತಾವಿಕ ಹಾಗೂ ಸ್ವಾಗತಿಸಿದರು. ಖ್ಯಾತ ಸ್ಕೌಟರ್ ಮತ್ತು ಜಿಎ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಕ್ರೀಡಾ ವಿಭಾಗದ ಸದಸ್ಯ ಎಸ್.ಜೆ.ಏಳುಕೋಟಿ ಅವರು ಅತಿಥಿಗಳ ಪರಿಚಯ ಮಾಡಿದರು. ಗೌರಿ ಪೂಜಾರಿ ಮತ್ತು ಸಂಗಡಿಗರು ಕ್ರೀಡಾ ಜ್ಯೋತಿ ಆರೋಹಣ ಮಾಡಿದರು. ಸೋನಾಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಎ.ಜಿ.ಬಾಯನ್ನವರ ವಂದಿಸಿದರು. ಸಿ.ಎಂ.ಪಾಗದ ಮತ್ತು ಪಿ.ಆರ್. ಸುಣಗಾರ ನಿರೂಪಿಸಿದರು.
ಬೆಳಗಾವಿಯ ಜಿ.ಎ. ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ವಾರ್ಷಿಕ ಕ್ರೀಡಾಕೂಟಕ್ಕೆ ರಾಮರಾವ್ ಚಾಲನೆ ಸಂಭ್ರಮದ ಕ್ಷಣಕ್ಕೆ ಸಾಕ್ಷಿ : ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದ ವಿದ್ಯಾರ್ಥಿಗಳು


