ಬೆಳಗಾವಿ ಸುವರ್ಣಸೌಧ : ಕರ್ನಾಟಕವನ್ನು ಬೆಸೆಯುವ, ಉತ್ತರದಿಂದ ದಕ್ಷಿಣ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಬೀದರ್-ಚಾಮರಾಜನಗರ ಹೆದ್ದಾರಿ ಕಲ್ಯಾಣ ಪಥ ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯವು ಕಲ್ಯಾಣ-ಕರ್ನಾಟಕ ಪ್ರದೇಶಗಳಾದ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ೪೫೩ರಡಿ ಪರಿಷತ್ತಿನಲ್ಲಿ ಡಿ.೧೦ರಂದು ಸದಸ್ಯ ಶಶಿಲ್ ಜಿ. ನಮೋಶಿ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಲ್ಯಾಣ ಪಥ ಯೋಜನೆಯನ್ನು ಕೆ.ಆರ್.ಆರ್.ಡಿ.ಎ ದಿಂದ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಕಲ್ಯಾಣ ಪಥ ಯೋಜನೆಯಡಿ ಒಟ್ಟು ೧೧೨೪.೭೦ ಕಿ.ಮೀ. ಉದ್ದದ ರಸ್ತೆ ಕಾಮಗಾರಿಗಳು ರೂ. ೧೦೦೦ ಕೋಟಿಗಳ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆ ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿದ್ದು, ೨೦೨೫-೨೬ನೇ ಸಾಲಿನಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಒಟ್ಟು ೨೮೬ ಕಾಮಗಾರಿಗಳನ್ನು ಕೈಗೊಂಡಿದ್ದು, ೨೮೧ ಕಾಮಗಾರಿಗಳು ಪ್ರಗತಿಯಲ್ಲಿವೆ. ೦೫ ಕಾಮಗಾರಿಗಳು ಟೆಂಡರ್ ಪ್ರಕ್ರಿಯಯಲ್ಲಿದೆ. ಈಗಾಗಲೇ ೭೫ ಕಿ.ಮೀ ಉದ್ದವನ್ನು ಪೂರ್ಣಗೊಳಿಸಿದ್ದು, ರೂ.೧೫೦ ಕೋಟಿ ವೆಚ್ಚ ಮಾಡಲಾಗಿದೆ ಎಂದು ಕೆಆರ್ಆರ್ಡಿಎ ವರದಿ ನೀಡಿದೆ ಎಂದು ಸಚಿವರು ತಿಳಿಸಿದರು.
ಗ್ರಾಮೀಣ ರಸ್ತೆ ಸಂಪರ್ಕವು ಗ್ರಾಮೀಣ ಕ್ಷೇತ್ರದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಹೆಚ್ಚಿಸುವಲ್ಲಿ ಪ್ರಮುಖ ಅಂಶವಾಗಿರುವುದರಿಂದ ಗ್ರಾಮೀಣ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವ ಅಗತ್ಯತೆ ಇರುತ್ತದೆ. ಗ್ರಾಮೀಣ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸುವುದರಿಂದ ಗ್ರಾಮೀಣ ಭಾಗದ ಜನರಿಗೆ ಜಿಲ್ಲಾ/ತಾಲ್ಲೂಕು ಕೇಂದ್ರಕ್ಕೆ ಹಾಗೂ ಮಾರುಕಟ್ಟೆ/ಆಸ್ಪತ್ರೆ/ ಶೈಕ್ಷಣಿಕ ಕೇಂದ್ರಗಳಿಗೆ ಸಂಪರ್ಕ ದೊರಕಲಿದ್ದು ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪೂರಕವಾಗುವುದು. ಈ ಹಿನ್ನೆಲೆಯಲ್ಲಿ ಕಲ್ಯಾಣ ಪಥ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
****
ಮಂಗಳೂರು ಐಟಿ ಪಾರ್ಕ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನ;
ಅಗತ್ಯಬಿದ್ದರೆ ಚರ್ಚಿಸಿ ಮಾರ್ಗಸೂಚಿ ಬದಲಾವಣೆ -ಸಚಿವ ಪ್ರಿಯಾಂಕ್ ಖರ್ಗೆ
ಬೆಳಗಾವಿ ಸುವರ್ಣ ವಿಧಾನಸೌಧ : ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಮಂಗಳೂರಿನಲ್ಲಿ ಐಟಿ ಪಾರ್ಕ್ ವಾಣಿಜ್ಯ ಕಛೇರಿ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಡಿ.15 ರಂದು ಟೆಂಡರ್ ಬಿಡ್ ತರೆಯಲಾಗುತ್ತದೆ. ನಂತರ ಅಗತ್ಯಬಿದ್ದರೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಟೆಂಡರ್ ಮಾರ್ಗಸೂಚಿಯಲ್ಲಿ ಬದಲಾವಣೆ ತರಲು ಸರ್ಕಾರ ಸಿದ್ಧವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಮಂಗಳೂರು, ಉಡುಪಿ ಹಾಗೂ ಮಣಿಪಾಲ್ ನಗರಗಳನ್ನು ಕೇಂದ್ರವಾಗಿಸಿಕೊಂಡು ಸ್ಥಳೀಯವಾಗಿ ಐಟಿ ಹಾಗೂ ಬಿಟಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ಸರ್ಕಾರ ಮುಂದಡಿ ಇಟ್ಟಿದೆ. ಈ ಹಿನ್ನಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಐಟಿ ಉದ್ಯಮಿಗಳು, ಶಿಕ್ಷಣ ಕ್ಷೇತ್ರದ ಪ್ರಮುಖರು, ಕ್ರೆಡಾಯ್ (ಕರ್ನಾಟಕ ರಿಯಲ್ ಎಸ್ಟೇಟ್ ಡೆವಲ್ಪರ್ಸ್ ಅಸೋಸಿಯೇಷನ್) ಸೇರಿದಂತೆ ಎಲ್ಲಾ ಭಾಗಿದಾರರೊಂದಿಗೆ ಚರ್ಚಿಸಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಇದರ ಅನುಸಾರ ವಾಣಿಜ್ಯ ಕಛೇರಿ ಟೆಕ್ಪಾರ್ಕ್ ನಿರ್ಮಿಸುವ ಟೆಂಡರ್ದಾರರಿಗೆ ವಿನ್ಯಾಸ ನಿರ್ಮಾಣ, ಹಣಕಾಸು ಕಾರ್ಯಾಚರಣೆ ಮತ್ತು ವರ್ಗಾವಣೆಗೆ ಮುವತ್ತು ವರ್ಷಗಳ ಅವಧಿಗೆ ಸರ್ಕಾರ ಭೂಮಿಯನ್ನು ಗುತ್ತಿಗೆ ನೀಡಲಾಗುತ್ತದೆ. ಈ ಗುತ್ತಿಗೆ ಅವಧಿಯ ನಂತರ ಮುಂದಿನ ಮುವತ್ತು ವರ್ಷಗಳಿಗೆ ವಿಸ್ತರಿಸಲು ಅವಕಾಶವಿದೆ. ಮಂಗಳೂರಿನ ಇತರೆ ಖಾಸಗಿ ಟೆಕ್ ಕಂಪನಿಗಳು ಸಹ ಕಚೇರಿಗಳನ್ನು ನಿರ್ಮಾಣ ಮಾಡುತ್ತಿವೆ. ಇಲ್ಲಿ ಟೆಕ್ ಕಂಪನಿಗಳಿಗೆ ಸರ್ಕಾರಿ ದರಕ್ಕಿಂತಲೂ ಕಡಿಮೆ ಮೊತ್ತದಲ್ಲಿ ಬಾಡಿಗೆ ವಿಧಿಸುತ್ತಿವೆ ಎನ್ನುವ ಮಾಹಿತಿಯಿದೆ. ಆದರೆ ಸರ್ಕಾರದ ವಾಣಿಜ್ಯ ಕಚೇರಿ ಟೆಕ್ ಪಾರ್ಕ್ನಲ್ಲಿ ಜಾಗ ಪಡೆಯುವ ಕಂಪನಿಗಳಿಗೆ ಕೌಶಲ್ಯ ತರಬೇತಿ, ನೋಂದಣಿ ಹಾಗೂ ಟೆಕ್ ಸಮಾವೇಶಗಳಲ್ಲಿ ವೇದಿಕೆ ಕಲ್ಪಿಸುವ ಮೂಲಕ ಜಾಗತಿಕ ಮನ್ನಣೆ ದೊರಕಿಸಲು ಸರ್ಕಾರ ಸಹಾಯ ಮಾಡಲಿದೆ. ಆದ್ದರಿಂದ ಖಾಸಗಿ ಕಂಪನಿಗಳು ಸರ್ಕಾರದ ವಾಣಿಜ್ಯ ಕಚೇರಿ ಟೆಕ್ ಪಾರ್ಕ್ನಲ್ಲಿ ಕಾರ್ಯಾರಂಭ ಮಾಡುವ ವಿಶ್ವಾಸವಿದೆ. ಹಸಿರು ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡೆನ್ಮಾರ್ಕ್ ದೇಶದ ಗಲ್ಫ್ ರಿಸರ್ಚ್ ಕಂಪನಿ ಮಂಗಳೂರಿನಿಂದಲೇ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಮಂಗಳೂರು ಸಹ ಐಟಿ ಬಿಟಿ ಕ್ಷೇತ್ರದಲ್ಲಿ ಪ್ರಮುಖ ನಗರವಾಗಿ ಬೆಳೆಯಲಿದೆ. ಇದೇ ಮಾದರಿಯಲ್ಲಿ ರಾಜ್ಯದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಳ್ಳಾರಿ, ಕಲಬುರಗಿ ನಗರಗಳಲ್ಲಿಯೂ ಖಾಸಗಿ ಸಹಭಾಗಿತ್ವದಲ್ಲಿ ಐಟಿ ಬಿಟಿ ಟೆಕ್ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
*****
ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಕ್ಷಮತೆ ಹೆಚ್ಚಳಕ್ಕೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ
ಬೆಳಗಾವಿ ಸುವರ್ಣಸೌಧ : ಕೇಂದ್ರದಿಂದ ರಾಜ್ಯಕ್ಕೆ ಹಂಚಿಕೆ ಮಾಡಲಾದ ಎಲೆಕ್ಟ್ರಿಕ್ ಬಸ್ ಗಳ ಕಾರ್ಯಕ್ಷಮತೆ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ೪೪೬ರ ಮೇಲೆ ಅವರು ಮಾತನಾಡಿದರು.
ಸಾರ್ವಜನಿಕ ಸುಗಮ ಸಂಚಾರಕ್ಕೆ ಎಲೆಕ್ಟ್ರಿಕ್ ಬಸ್ಗಳ ವ್ಯತ್ಯಯ ಉಂಟಾದಾಗ ಸಂಸ್ಥೆಯ ಡಿಸೇಲ್ ಬಸ್ಸುಗಳನ್ನು ಕಾರ್ಯಾಚರಣೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ಷಮತೆಯನ್ನು ಸಾಧಿಸದ ಅಂಶಗಳಿಗೆ ಕರಾರು ಒಪ್ಪಂದದಲ್ಲಿ ದಂಡವನ್ನು ವಿಧಿಸಲಾಗಿದೆ.
ಬಸ್ಸುಗಳ ಕಾರ್ಯಕ್ಷಮತೆಯ ಬಗ್ಗೆ ಈಗಾಗಲೇ ಭಾರತ ಸರ್ಕಾರದ ಭಾರೀ ಕೈಗಾರಿಕೆಗಳ ಸಚಿವರಿಗೆ ಪತ್ರದ ಮೂಲಕ ಮಾಹಿತಿ ಸಲ್ಲಿಸಲಾಗಿದೆ. ಅದರಂತೆ, ದಿನಾಂಕ ೦೬.೧೧.೨೦೨೫ ರಂದು ಭಾರೀ ಕೈಗಾರಿಕೆಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ.ಹನೀಫ್ ಖುರೇಷಿ ಅವರ ಅಧ್ಯಕ್ಷತೆಯಲ್ಲ ಎಲೆಕ್ಟ್ರಿಕ್ ಬಸ್ಸುಗಳ ಎಲ್ಲಾ ಆಚರಣಾದಾರರೊಂದಿಗೆ ಸಭೆಯನ್ನು ನಡೆಸಲಾಗಿರುತ್ತದೆ ಹಾಗೂ ೪೫ ದಿನಗಳೊಳಗೆ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಇದುವರೆಗೆ ಯಾವುದೇ ಎಲೆಕ್ಟ್ರಿಕ್ ಕಾರ್ಯಾಚರಣೆಯಲ್ಲಿ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಬೆಂಗಳೂರು (ನಗರ), ಮಡಿಕೇರಿ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ೪೭ ಎಲೆಕ್ಟ್ರಿಕ್
ಬಸ್ಗಳು ಕಾರ್ಯಾಚರಣೆಯಲ್ಲಿವೆ.
ಜನವರಿ-೨೦೨೩ ರಿಂದ ಇಲ್ಲಿಯವರೆಗೆ ಕಾರ್ಯಾಚರಣೆ ಸಮಯದಲ್ಲಿ ಆಕಸ್ಮಿಕವಾಗಿ ವಿವಿಧ ಕಾರಣಗಳಿಂದ ಒಟ್ಟು ೪೭೭ ಬಾರಿ ಬಸ್ಸುಗಳು ಅವಘಡ ಸಂಭವಿಸಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಪರ್ಯಾಯ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಬೆಂಗಳೂರ ಮಹಾನಗರ ಸಾರಿಗೆ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ೧೨೨೧ ಹವಾನಿಯಂತ್ರಣ ರಹಿತ ಎಲೆಕ್ಟಿçಕ್ ಬಸ್ಸುಗಳು ಕಾರ್ಯಾಚರಣೆಯಲ್ಲಿರುತ್ತವೆ.
೨೦೨೩-೨೪ ರಿಂದ ಸೆಪ್ಟೆಂಬರ್-೨೦೨೫ ರವರೆಗೆ ಬ್ಯಾಟರಿ ದೋಷಗಳಿಂದ ೧೪,೦೮೨ ಬಾರಿ ಹಾಗೂ ಇನ್ನೀತರ ದೋಷದಿಂದ ೨೦೪೯ ಬಾರಿ ಅಪಘಾತಕ್ಕೀಡಾಗಿರುತ್ತವೆ. ಸಾರ್ವಜನಿಕ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಕಂಪನಿಯವರು ಈ ಬಸ್ಸುಗಳನ್ನು ದುರಸ್ತಿಗೊಳಿಸಿ ಆಚರಣೆಗೆ ಒದಗಿಸಿರುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.
****


