ಶಿವಮೊಗ್ಗ: ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಕುರಿತ ಊಹಾಪೋಹಗಳಿಗೆ ಸಚಿವರು ಕೊನೆಗೂ ತೆರೆ ಎಳೆದಿದ್ದಾರೆ. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಈಗಿನಂತೆ ವರ್ಷಕ್ಕೆ ಮೂರು ಬಾರಿಯೇ ಮುಂದುವರಿಯಲಿದೆ. ಅದನ್ನು ಎರಡು ಬಾರಿಗೆ ಇಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಅದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರುವುದಿದ್ದರೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಅದನ್ನು ಮಾಧ್ಯಮಗಳಿಗೆ ತಿಳಿಸಿಯೇ ಮುಂದುವರೆಯಲಿದ್ದೇವೆ. ಹೀಗಾಗಿ ಆತುರ ಬೇಡ ಎಂದರು.
ಪರೀಕ್ಷೆಗಳ ಸಂಖ್ಯೆಯನ್ನು ಎರಡು ಬಾರಿಗೆ ಇಳಿಸಲಾಗುತ್ತದೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪು ಸುದ್ದಿ ಪ್ರಕಟವಾಗಿದೆ. ಇದರಿಂದ ಮಕ್ಕಳಲ್ಲಿ ವೃಥಾ ಗೊಂದಲ ಉಂಟಾಗಲಿದೆ. ಅವರು ಧೈರ್ಯ ಕಳೆದುಕೊಳ್ಳಲಿದ್ದಾರೆ. ಇಂತಹ ವಿಷಯಗಳಲ್ಲಿ ಮಾಧ್ಯಮದವರು ಜವಾಬ್ದಾರಿಯಿಂದ ವರ್ತಿಸಲಿ. ಆ ಬಗ್ಗೆ ಅನಗತ್ಯ ಚರ್ಚೆಗಳೂ ಬೇಡ ಎಂದು ಸಲಹೆ ನೀಡಿದರು.


