ಬೆಳಗಾವಿ: ಅಂತರರಾಷ್ಟ್ರೀಯ ಕೃಷ್ಣಭಾವನಾಮೃತ ಸಂಘ (ಇಸ್ಕಾನ್) ವತಿಯಿಂದ ನಡೆಯುವ ಶ್ರೀಕೃಷ್ಣ ರಥಯಾತ್ರೆಯು ಈ ಬಾರಿ ಜನವರಿ 24 ಮತ್ತು 25 ರಂದು ಬೆಳಗಾವಿ ನಗರದಲ್ಲಿ ನಡೆಯಲಿದೆ. ಎಂದು ಇಸ್ಕಾನ್ ಬೆಳಗಾವಿ ಅಧ್ಯಕ್ಷ ಪರಮಪೂಜ್ಯ ಭಕ್ತಿರಸಾಮೃತ ಸ್ವಾಮಿ ಮಹಾರಾಜರು ಹೇಳಿದರು. ‘ಬೆಳಗಾವಿಯವರ ಉತ್ಸವ’ ಎಂದು ಗುರುತಿಸಿಕೊಂಡಿರುವ ಈ ರಥಯಾತ್ರೆಯು ಇದು 28ನೇ ವರ್ಷವಾಗಿದ್ದು, ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಈ ರಥಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಇದಕ್ಕಾಗಿ ಇಸ್ಕಾನ್ ಬೆಳಗಾವಿ ವತಿಯಿಂದ ಒಂದು ಸಮಿತಿಯನ್ನು ಆಯೋಜಿಸಲಾಗಿದ್ದು, ಈ ಸಮಿತಿಯು ಎರಡು ದಿನಗಳ ಕಾಲ ನಡೆಯುವ ರಥಯಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಶ್ರಮಿಸುತ್ತಿದೆ.
ಈ ರಥಯಾತ್ರೆಯಲ್ಲಿ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜನವರಿ 24 ರಂದು ರಥಯಾತ್ರೆ ಮತ್ತು ಜನವರಿ 25 ರಂದು ದೇವಾಲಯದ ಆವರಣದಲ್ಲಿ ನಿರ್ಮಿಸಲಾಗುವ ಶಾಮಿಯಾನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಈ ರಥಯಾತ್ರೆಯಲ್ಲಿ ಇಸ್ಕಾನ್ ಅನೇಕ ಹಿರಿಯ ಸನ್ಯಾಸಿಗಳು ಭಾಗವಹಿಸಲಿದ್ದಾರೆ.


