ಇತಿಹಾಸ ನಿರ್ಮಿಸಿದ ಆ ದಿನಗಳು: ನಂಜುಂಡಪ್ಪ ವರದಿ ನಾಡಿನ ಜನತೆಗೆ ಸುಸ್ಪಷ್ಟವಾದಂತಹದು. ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳನ್ನು ಕ್ಷೇತ್ರವಾರು ಅಭಿವೃದ್ಧಿ ಪಡಿಸಬೇಕೆಂಬ ಉದ್ದೇಶಗಳ ಈಡೇರಿಕೆ ಕುಂಟುತ್ತಾ ಸಾಗುತ್ತಿದ್ದ ಸಂದರ್ಭದಲ್ಲಿಯೇ ಬೆಳಗಾವಿಯಲ್ಲಿಯೊಂದು ಅಧಿವೇಶ ಸಂಘಟಿಸುವ ಮೂಲಕ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವುದು ಅಗತ್ಯವೆಂದು ಅರಿತು ನಾನು ಬಸವರಾಜ ಹೊರಟ್ಟಿ, ಎಂ.ಪಿ.ನಾಡಗೌಡರು, ಎಂ.ಸಿ.ನಾಣಯ್ಯ, ಬಸವರಾಜ ಬೊಮ್ಮಾಯಿಯವರು ಜೊತೆಯಾಗಿ ಅಂದಿನ ಮುಖ್ಯಮಂತ್ರಿಯಾಗಿ ಧರಂಸಿಂಗ್(2004-2006)ಅವರನ್ನು ಭೇಟಿಯಾಗಿ ಅಧಿವೇಶನ ನಡೆಸುವ ಕುರಿತು ಪ್ರಸ್ತಾಪಿಸಿದೆವು. ಆದರೆ ಧರಂಸಿಂಗ್ರು ಅದನ್ನು ಕಲಬುರಗಿ ಜೇವರ್ಗಿಯಲ್ಲಿ ನಡೆಸಿದರೆ ಹೇಗೆ ಎಂದು ಒಲವು ತೋರಿಸಿದರು. ಏಕೆಂದರೆ ಅವರು ಆ ಭಾಗದವರಾಗಿದ್ದರು, ಅವರು ರಚಿಸಿದ ಸಮಿತಿಯಿಂದಲೂ ಸ್ಪಷ್ಟವಾದ ನಿಲುವು ತೆಗೆದುಕೊಳ್ಳಲಾರದೆ ಕೈಚೆಲ್ಲಿದರು. ಮುಂದೆ ಬಿಜೆಪಿ ಹಾಗೂ ಜೆಡಿಎಸ್ ಸಮಿಶ್ರ ಸರ್ಕಾರ ರಚನೆಯಾದಾಗ ಇದೇ ಪ್ರಸ್ತಾವನೆಯನ್ನು ಮಾನ್ಯ ಕುಮಾರ ಸ್ವಾಮಿಯವರೊಂದಿಗೆ ಚರ್ಚಿಸಿದಾಗ ಅದಕ್ಕೆ ಒಮ್ಮತದಿಂದ ಒಪ್ಪಿದರು. ಕೊನೆಗೆ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಜೆಎನ್ಎಂಸಿ ಕಾಲೇಜಿನಲ್ಲಿ 12 ದಿನಗಳ ಅಲ್ಪಾವಧಿಯಲ್ಲಿ ಸಿದ್ಧಪಡಿಸಲು ನನ್ನೊಂದಿಗೆ ಐಎಎಸ್ ಅಧಿಕಾರಿ ಶಾಲಿನಿ ರಜನಿಶ್ ಸಹಕಾರದಿಂದ ಐತಿಹಾಸಿಕ ಅಧಿವೇಶನ ಹೊಸ ವ್ಯಾಖ್ಯನವನ್ನು ಬರೆಯಿತು. 2009 ಮತ್ತೊಮ್ಮೆ ಕೆಎಲ್ಇ ಅಂಗಳದಲ್ಲಿ ಯಶಸ್ವಿಯಾಗಿ ಅಧಿವೇಶನ ಜರುಗಿ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ಹೊಸ ಹೆಜ್ಜೆ ಇಟ್ಟಿತು. ಅದೇಲ್ಲದರ ಫಲಶ್ರುತಿಯೆಂಬಂತೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಶಾಶ್ವತವಾದ ಸೌಧವನ್ನು ನಿರ್ಮಿಸಲು ಸ್ಥಳ ಗುರುತಿಸುವ ನಿಟ್ಟಿನಲ್ಲಿ ಶಾಸಕರಾಗಿದ್ದ ಅಭಯ ಪಾಟೀಲ ಹಾಗೂ ಮತ್ತಿತರರ ಕೊಡುಗೆ ಅಸದಳವೆನ್ನಬೇಕು. ಸುಮಾರು 500 ಕೋಟಿ ರೂ. ಖರ್ಚು ಮಾಡಿ ಬೆಂಗಳೂರಿನ ವಿಧಾನಸೌಧದ ಪ್ರತಿರೂಪವಾಗಿ 2012ರಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ಕಟ್ಟಲಾಗಿದೆ. ಸೌಧ ತಲೆ ಎತ್ತಿ 13 ವರ್ಷವಾಗುತ್ತಾ ಬಂದರೂ ಅದನ್ನು ಕಟ್ಟಿದ ಉದ್ದೇಶಗಳು ಮಾತ್ರ ಈಡೇರಿಲ್ಲ.
ಹುಸಿಯಾದ ನಿರೀಕ್ಷೆಗಳು: ಬೆಳಗಾವಿ ವಿಧಾನಸೌಧ ಅಧಿವೇಶನವು ಉತ್ತರ ಕರ್ನಾಟಕದ ಜನತೆಗೆ ಪ್ರತೀ ವರ್ಷವೂ ನಿರೀಕ್ಷೆಯ ಕ್ಷಣ. ರಾಜ್ಯದ ರಾಜಕೀಯ ಹಾಗೂ ಆಡಳಿತಾತ್ಮಕ ಗಮನವನ್ನು ಸ್ವಲ್ಪ ಸಮಯವಾದರೂ ಈ ಭಾಗಕ್ಕೆ ತಂದು, ದೀರ್ಘಕಾಲದಿಂದ ಬಗೆಹರಿಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂಬ ಆಶಯದಿಂದ ಇದರ ಸುತ್ತ ಹಲವಾರು ನಿರೀಕ್ಷೆಗಳು, ಕುತೂಹಲಗಳು ಮನೆಮಾಡಿಕೊಂಡಿರುವುದು ಸೂರ್ಯನಷ್ಟೇ ಸತ್ಯ. ಆದರೆ ಅಧಿವೇಶನದಲ್ಲಿ ಜನತೆ ಹಾಗೂ ಸ್ಥಳೀಯ ನಾಯಕರ ನಿರೀಕ್ಷೆಗಳು ಭಗ್ನಗೊಂಡಿದ್ದೇ ಹೆಚ್ಚು.
ಉತ್ತರ ಕರ್ನಾಟಕವು ಕರ್ನಾಟಕದ ಭೌಗೋಳಿಕವಾಗಿ ವಿಶಾಲವಾಗಿರುವ ಭಾಗ ಮಾತ್ರವಲ್ಲ, ಕೃಷಿ, ಕೈಗಾರಿಕೆ, ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಕೂಡ ಮಹತ್ತರವಾದ ಪಾತ್ರವಹಿಸಿದೆ. ಆದರೆ ಅಭಿವೃದ್ಧಿ ಸೂಚ್ಯಾಂಕಗಳನ್ನು ಗಮನಿಸಿದರೆ, ಬೆಂಗಳೂರು–ಮೈಸೂರು–ಶಿವಮೊಗ್ಗಾ ಕೇಂದ್ರಿತ ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಈ ಭಾಗದಲ್ಲಿ ಹಿಂದುಳಿದ ಪ್ರದೇಶಗಳೇ ಹೆಚ್ಚು ಹಾಗೂ ಸುಸ್ಪಷ್ಟ. ಇದೇ ಕಾರಣಕ್ಕೆ ಬೆಳಗಾವಿ ಅಧಿವೇಶನವು ಈ ಅಸಮತೋಲನವನ್ನು ಸರಿಮಾಡುವ ವೇದಿಕೆಯಾಗಿ ಬೆಳೆಯಬೇಕಾಗಿತ್ತು. ಅಧಿವೇಶನದಲ್ಲಿ ನಡೆದ ಕಲಾಪಗಳು, ಚರ್ಚೆಗಳು, ಪ್ರಶ್ನೋತ್ತರಗಳು ಮತ್ತು ನಿರ್ಧಾರಗಳನ್ನು ಪರಿಶೀಲಿಸಿದರೆ, ಮೂಲ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯವಾದ ದೃಢನಿಲುವು ಇಂದಿಗೂ ಕಾಣಿಸಲಿಲ್ಲ ಎಂಬುದು ಬಹುದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ಉದ್ದೇಶವೇನಾಯಿತು: ಉತ್ತರ ಕರ್ನಾಟಕದ ಜನತೆ ಬಹುವರ್ಷಗಳಿಂದ ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳು—ಕೈಗಾರಿಕಾ ವಲಯಗಳ ಹಿನ್ನಡೆ, ನೀರಾವರಿ ಯೋಜನೆಗಳು, ಮೂಲಸೌಕರ್ಯದಲ್ಲಿ ಅಸಮತೋಲನ, ಉದ್ಯೋಗಾವಕಾಶಗಳ ಅಭಾವ—ಇವುಗಳಿಗೆ ಸ್ಪಷ್ಟ ಮತ್ತು ದೀರ್ಘಕಾಲೀನ ಪರಿಹಾರ ದೊರಕಬೇಕು ಎಂಬುದು ಉತ್ತರ ಕರ್ನಾಟಕ ಜನತೆಯ ಗಟ್ಟಿಧ್ವನಿಯಾಗಿತ್ತು. ಅಧಿವೇಶನ ಸರ್ಕಾರಕ್ಕೆ ತಲುಪಿಸುವ ಮುಖ್ಯ ವೇದಿಕೆಯಾಗಿತ್ತು. ಆದರೆ ಯಾವೊಂದು ಬೆಳಗಾವಿಯ ಅಧಿವೇಶನಗಳು ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಲು ವಿಫಲವಾಗಿವೆ.
ಸದನದಲ್ಲಿ ಇಚ್ಛಾಶಕ್ತಿಯ ಕೊರತೆ: ಅಧಿವೇಶನದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆಗಳು ಕಾಣಿಸುತ್ತಿಲ್ಲ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳು ಎದುರಿಸುತ್ತಿರುವ ಕುಡಿಯುವ ನೀರಿನ ಬಿಕ್ಕಟ್ಟು, ರೈತರ ಸಂಕಷ್ಟಗಳು, ಕೈಗಾರಿಕಾ ಹೂಡಿಕೆಯ ಕೊರತೆ ಮತ್ತು ಆರೋಗ್ಯ ಸೇವೆಗಳ ದುರ್ಬಲಿಕರಣ, ಶೈಕ್ಷಣಿಕ ಹಿನ್ನಡೆಗಳು ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳು ಅಜೆಂಡಾದಲ್ಲಿದ್ದರೂ, ಪರಿಣಾಮಕಾರಿ ನಿರ್ಧಾರಗಳತ್ತ ಮುನ್ನಡೆ ಕಂಡುಬರದೇ ಇರುವುದು ದುದೈರ್ವದ ಸಂಗತಿ.
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಬಹುಕಾಲದಿಂದ ಬೇಡಿಕೆ ಇರುವ ಉತ್ತರ ಕರ್ನಾಟಕ ಅಭಿವೃದ್ಧಿ ಮಂಡಳಿ, ಕಲ್ಯಾಣ ಕರ್ನಾಟಕ ವಿಶೇಷ ಪ್ಯಾಕೇಜ್ ಮೊದಲಾದ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಗಂಭೀರ ವಿಮರ್ಶೆ, ಪರಿಶೀಲನೆ ಅಥವಾ ಹೊಸ ದಿಕ್ಕಿನ ಚರ್ಚೆ ಸದನ ಮುಂದೆ ಬರುತ್ತಿಲ್ಲ. ಘೋಷಣೆಗಳಷ್ಟೇ ಹೊರತು ಕಾರ್ಯೋನ್ನತಿಯ ಸ್ಪಷ್ಟ ಮಾರ್ಗನಕ್ಷೆಯನ್ನು ಮಂಡಿಸುವಲ್ಲಿ ವಿಫಲವಾಗುತ್ತಿವೆ.
ಬೆಳಕುಚೆಲ್ಲಬೇಕಾದ ಸಂಗತಿಗಳ ಪ್ರಸ್ತಾಪಕ್ಕೆ ಬ್ರೇಕ: ಬೇಸಾಯ ಆಧಾರಿತ ಆರ್ಥಿಕತೆಯ ಮೇಲೆ ನಿಂತಿರುವ ಈ ಪ್ರದೇಶಕ್ಕೆ ಅಗತ್ಯವಾಗಿರುವ ನೀರಾವರಿ ಯೋಜನೆಗಳ ವಿಸ್ತರಣೆ ಮತ್ತು ಬಲಪಡಿಸುವ ಕುರಿತು ಸ್ಪಷ್ಟ ನಿರ್ಧಾರಗಳು ತೆಗೆದುಕೊಳ್ಳದಿರುವುದು ರೈತರ ಅಸಮಾಧಾನವನ್ನು ಹೆಚ್ಚಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ, ತುಂಗಭದ್ರಾ, ಭೀಮಾ ಜಲವಿನಿಯೋಗ ವಿಚಾರಗಳಲ್ಲಿ ನಿರ್ಣಾಯಕ ಚರ್ಚೆ ಗಳು ನಡೆಯದೇ ಇರುವುದು ವಿಪರ್ಯಾಸ.
ಸದನಗಳು ಗದ್ದಲಗಳ ಗೂಡಾಗುತ್ತಿರುವುದು: ಇದಲ್ಲದೆ, ಸ್ಥಳೀಯ ಸಾರ್ವಜನಿಕ ಪ್ರತಿನಿಧಿಗಳಿಗೆ ಮಾತನಾಡಲು ಸಾಕ್ಷ್ಯಪೂರ್ಣ ಅವಕಾಶ ದೊರಕಲೇ ಇಲ್ಲ ಎಂಬ ದೂರೂ ಬಹಳ ಸಲ ಕೇಳಿಬಂದಿದೆ. ರಾಜಕೀಯ ವಾದ–ಪ್ರತಿವಾದಗಳಿಗೆ ಹೆಚ್ಚು ಸಮಯ ವ್ಯಯವಾದರೆ, ಜನಜೀವನಕ್ಕೆ ಸಂಬಂಧಿಸಿದ ವಿಚಾರಗಳು ಅತೃಪ್ತಿದಾಯಕವಾಗಿ ಪಕ್ಕಕಿಟ್ಟು ಅಧಿವೇಶನವನ್ನು ತರಾತುರಿಯಲ್ಲಿ ಮುಗಿಸಲಾಗುತ್ತಿದೆ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಹಿಂದುಳಿತ ಕೂಡ ಅಧಿವೇಶನದ ಗಂಭೀರ ಚರ್ಚೆಗೆ ಬಾರದ ಮತ್ತೊಂದು ಉಲ್ಲೇಖನೀಯ ವಿಷಯ. ವೈದ್ಯಕೀಯ ಕಾಲೇಜುಗಳ ಕೊರತೆ, ಜಿಲ್ಲಾ ಆಸ್ಪತ್ರೆಗಳ ನಿರ್ಲಕ್ಷಿತ ಸ್ಥಿತಿ, ಗ್ರಾಮೀಣ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಕೊರತೆ, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಸಮಸ್ಯೆ ಇಂದಿಗೂ ಹಾಗೇ ಉಳಿದುಕೊಂಡಿರುವುದು ಖೇದಕರ.
ಪೂರ್ಣಾವಧಿಯ ಅಧಿವೇಶನ ಬೇಕು : ನಾನು ಈ ಮೊದಲು ಕೂಡ ಹಲವಾರು ಸಲ ಬಹಿರಂಗವಾಗಿಯೇ ಹೇಳಿದ್ದೆ ಇಲ್ಲಿ ಪೂರ್ಣಾವಧಿಯ ಅಧಿವೇಶನಗಳು ಜರುಗಬೇಕೆಂದು. ಮುಖ್ಯವಾಗಿ ಇಲ್ಲಿ ಶಾಸಕರ ಭವನಗಳನ್ನು ನಿರ್ಮಿಸಬೇಕು, ಸಿಬ್ಬಂದಿವರ್ಗದವರಿಗೆ ವಸತಿಗೃಹಗಳನ್ನು ನಿರ್ಮಿಸಬೇಕು, ಹಲವು ಇಲಾಖೆಗಳನ್ನು ಸುವರ್ಣಸೌಧಕ್ಕೆ ವರ್ಗಾಯಿಸಬೇಕೆಂದು. ಈ ಕಾರ್ಯ ಎಲ್ಲಿಯ ವರೆಗೆ ನಡೆಯುವುದಿಲ್ಲೋ ಅಲ್ಲಿಯ ವರೆಗೆ 10 ದಿನದ ಅಧಿವೇಶ ನೆಪಕ್ಕೆ ನಡೆದಂತಾಗುವುದು. ಪ್ರತಿ ಅಧಿವೇಶನಕ್ಕೆ 30 ಕೋಟಿಗೂ ಹೆಚ್ಚು ರೂ.ಗಳ ವೆಚ್ಚ ಸಣ್ಣದಲ್ಲ. ಸಿಬ್ಬಂದಿವರ್ಗದವರಿಗೆ ಶಾಶ್ವತವಾದ ವಸತಿ ಕಟ್ಟಡಗಳು, ಸೌಲಭ್ಯಗಳನ್ನು ಒದಗಿಸಿ ದುಂದುವೆಚ್ಚಕ್ಕೆ ಬ್ರೇಕ್ ಹಾಕಬೇಕು. ಗರಿಷ್ಠ 20 ದಿನಗಳ ವರೆಗೆ ಅಧಿವೇಶ ಜರುಗಬೇಕು. ಆದರೆ ಹಾಗೆ ಆಗದ ಹೊರತು ಔಪಚಾರಿಕ ಅಧಿವೇಶನ ನಡೆದರೆ ಲಾಭವಿಲ್ಲ, ನಷ್ಟವೇ ಇದೆ.
ಒಟ್ಟಿನಲ್ಲಿ, ಬೆಳಗಾವಿ ವಿಧಾನಸೌಧ ಅಧಿವೇಶನವು ಉತ್ತರ ಕರ್ನಾಟಕದ ಜನರ ಆಕಾಂಕ್ಷೆಗಳನ್ನು ಪೂರೈಸುವ ವೇದಿಕೆ ಆಗಬೇಕಾದ ಸಂದರ್ಭದಲ್ಲಿ, ಕೇವಲ ಆಚರಣಾತ್ಮಕ ಕಾರ್ಯಕ್ರಮವಾಗಿ ಸೀಮಿತವಾಗಿರುವುದು ವಿಷಾದನೀಯ. ಸರಕಾರವು ಈ ಅಧಿವೇಶನಗಳಲ್ಲಿ ಸ್ಪಷ್ಟ ಗುರಿ, ನಿಶ್ಚಿತ ಕಾರ್ಯಪದ್ಧತಿ ಮತ್ತು ಜವಾಬ್ದಾರಿಯುತ ಅನುಷ್ಠಾನಕ್ಕೆ ಆದ್ಯತೆ ನೀಡುವುದು ಅತ್ಯವಶ್ಯಕ. ಉತ್ತರ ಕರ್ನಾಟಕದ ಅಭಿವೃದ್ಧಿ ರಾಜ್ಯದ ಸಮಗ್ರ ಅಭಿವೃದ್ಧಿಯಾಗಿರುವುದರಿಂದ, ಈ ಭಾಗದ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಷ್ಠೆಯನ್ನು ಸರ್ಕಾರ ತೋರಬೇಕು, ಇದೊಂದು ಶಾಸಕರಿಗೆ ಇದೊಂದು ಪಿಕ್ನಿಕ್ ಸ್ಫಾಟ್ ಆಗಬಾರದು ಎಂಬುದು ಜನರ ಸ್ಪಷ್ಟ ಸಂದೇಶ. ಅಧಿವೇಶನಕ್ಕಾಗಿ ಶ್ರಮಿಸಿದ ಹಿಂದಿನವರ ಹೋರಾಟ ಪರಿಶ್ರಮಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಶಾಶ್ವತವಾದ ಪರಿಹಾರಾತ್ಮಕವಾದ ಅಧಿವೇಶನ ಜರುಗಲೆಂಬುದು ಈ ಭಾಗದ ಜನತೆಯ ಆಶಯ.
ಬೆಳಗಾವಿ ವಿಧಾನಸೌಧ ಅಧಿವೇಶನ: ಒಂದು ವಿಶ್ಲೇಷಣೆ ಡಾ.ಪ್ರಭಾಕರ ಕೋರೆ ಕಾರ್ಯಾಧ್ಯಕ್ಷರು, ಕೆಎಲ್ಇ ಸಂಸ್ಥೆ, ಬೆಳಗಾವಿ


