ಬೆಳಗಾವಿ : ಇದು ಭಕ್ತಿ, ಸೌಂದರ್ಯ ಪ್ರಧಾನವಾದ ಕಲೆ. ದೇವರ ಮತ್ತು ಭಕ್ತನ ನಡುವಿನ ನಾದ ಸೇತುವೆ ಕಂಸಾಳೆ ಎಂದು ಪ್ರಾಚಾರ್ಯ ಪ್ರೊ. ಎಸ್. ಸಿ. ಪಾಟೀಲ ಅಭಿಪ್ರಾಯಪಟ್ಟರು.
ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯವು ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ನಿಮಿತ್ತ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂಸಾಳೆ ಗಾಯನ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಂಸಾಳೆ ಗಾಯನವು ನಮ್ಮ ನೆಲದ ಸೊಬಗು. ಅದು ಜಾನಪದ ಸಂಪತ್ತು. ನಾಡಿನ ಪರಂಪರೆ, ಇತಿಹಾಸ , ಸಂಸ್ಕೃತಿಯ ಸತ್ವ ಎಲ್ಲವೂ ಜಾನಪದದಲ್ಲಿ ಹುದುಗಿದೆ. ಸಾವಿರಾರು ವರ್ಷಗಳಿಂದ ನಮ್ಮ ಜನಜೀವನವನ್ನು ರಸಪೂರ್ಣವೂ, ಜೀವಂತವೂ ಆಗಿ ಉಳಿಸಿಕೊಂಡು ಬಂದಿದೆ ಈ ಕಲೆ. ಈ ಕಲೆಯು ಶ್ರೋತೃಗಳನ್ನು ಭಕ್ತಿ ಪರಾಕಾಷ್ಠೆಗೆ ಒಯ್ಯುತ್ತದೆ. ಇಂತಹ ಅಮೋಘವಾದ ಕಲೆಯನ್ನು ಜಾಗತೀಕರಣೋತ್ತರ ಸಂದರ್ಭದಲ್ಲಿ ಅದನ್ನು ಆರಾಧಿಸಿ, ಆಸ್ವಾದಿಸಿ ಅದರ ಪರಂಪರೆಯನ್ನು ನಾವೆಲ್ಲ ಉಳಿಸಬೇಕು ಎಂದರು.
ನಾಡಿನ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಒಂಬತ್ತು ಜನರ ತಂಡವು ವಿಶೇಷವಾದ ಪ್ರದರ್ಶನ ನೀಡಿತು. ಮಲೆಮಾದೇಶ್ವರ ಚಾರಿತ್ರಿಕ ಅಂಶಗಳನ್ನು ತಮ್ಮ ಹಾಡುಗಳಲ್ಲಿ ತಂದು ಹಾಡಿದ ಸಂದರ್ಭದಲ್ಲಿ ಪ್ರೇಕ್ಷಕರು ಮಂತ್ರ ಮುಗ್ಧರಾದರು. ಮಲೆಮಾದೇಶ್ವರ ಜೀವಂತಿಕೆಯನ್ನು ಅವರ ಹಾಡುಗಳಲ್ಲಿ ಇತ್ತು. ಸಂಗೀತ, ಸಾಹಿತ್ಯ, ನೃತ್ಯಗಳಿಂದ ನೆರೆದವರನ್ನು ರಂಜಿಸಿದರು.
ಉಪಪ್ರಾಚಾರ್ಯ ಅರ್ಜುನ ಜಂಬಗಿ ಸ್ವಾಗತಿಸಿದರು. ಉಪನ್ಯಾಸಕಿ ಲಾವಣ್ಯ ಗುಂಜಾಳ ನಿರೂಪಿಸಿ, ವಂದಿಸಿದರು.


