ಬೆಳಗಾವಿ : ಮೂಡಲಗಿ ತಾಲೂಕು ಯಾದವಾಡ ಗ್ರಾಮದ ದಾಲ್ಮಿಯ ಸಿಮೆಂಟ್ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಮೂವರು ಕಾರ್ಮಿಕರು ಆಯತಪ್ಪಿ ಬಿದ್ದು ಒಬ್ಬ ಕಾರ್ಮಿಕ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ರಮೇಶ್ ಬಾಬುಲಾಲ್ ರಾಮ್ ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ಬಾಗಲಕೋಟೆಯ ಕೆರೋಡಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡವರನ್ನು ನಂದಕುಮಾರ್ ಮತ್ತು ರಮೇಶ್ ಮಹೇಂದ್ರ ರಾಮ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಾರ್ಮಿಕರು ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಮಿಕ ಮೃತಪಡುತ್ತಿದ್ದಂತೆ ಕಾರ್ಖಾನೆಯ ಸೆಕ್ಯೂರಿಟಿ ಕಚೇರಿ ಮೇಲೆ ಕಾರ್ಮಿಕರು ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಮೆಂಟ್ ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಬಿಹಾರದಿಂದ ಬಂದಿರುವ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ಪ್ರತಿಭಟನೆಯಿಂದ ಪೊಲೀಸರು ಮಧ್ಯಪ್ರವೇಶಿಸಿ ಬಂದೋಬಸ್ತ್ ನಿಯೋಜಿಸಿದ್ದರು. ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.


