ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಂದಿನ ವಾರ ನಡೆಯಲಿರುವ ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನದ ಸಮಯದಲ್ಲಿ ಶಾಸಕರಿಗೆ ಅಧಿವೇಶನದ ದಿನ ಭತ್ಯೆಯನ್ನು ನೀಡಲಾಗುತ್ತಿದ್ದು ಈ ಕಾರಣದಿಂದಾಗಿ ಬರುವ ಚಳಿಗಾಲದ ಅಧಿವೇಶನದ ಸಮಯದಲ್ಲಿ ಶಾಸಕರಿಗೆ ಊಟ-ಉಪಹಾರ, ಚಹಾ-ಕಾಫಿ ಮುಂತಾದವುಗಳನ್ನು ಉಚಿತವಾಗಿ ನೀಡುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದಲ್ಲಿ ಊಟ-ಉಪಹಾರಗಳ ಸಲುವಾಗಿ ವೆಚ್ಚವಾಗುವ ಹಣವನ್ನು ಸಭಾಪತಿಯವರು ಮತ್ತು ಸಭಾಧ್ಯಕ್ಷರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸ್ವಂತ ಜೇಬಿನಿಂದ ಸರ್ಕಾರಕ್ಕೆ ಪುನಃ ಭರಿಸಿಕೊಳ್ಳುವ ಸಲುವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಮೂಲಕ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಸಭಾಪತಿ ಹಾಗೂ ಸಭಾಧ್ಯಕ್ಷರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ವಿನಂತಿಸಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು,
ಅಧಿವೇಶನದ ಸಮಯದಲ್ಲಿ ಊಟ-ಉಪಹಾರಗಳ ಸಲುವಾಗಿಯೇ ಸದಸ್ಯರಿಗೆ ದಿನವೊಂದಕ್ಕೆ 2,500 ರೂ.ಗಳ ದಿನಭತ್ಯೆಗಳನ್ನು ನೀಡಲಾಗುತ್ತಿದೆ. ಈ ಹಣದಲ್ಲಿಯೇ ಸದಸ್ಯರು ತಮ್ಮ ಇಚ್ಛಾನುಸಾರವಾಗಿ ಊಟ-ಉಪಹಾರ, ಚಹಾ-ಕಾಫಿಗಳನ್ನು ಯಥೇಚ್ಛವಾಗಿ ಸೇವಿಸಬಹುದಾಗಿದೆ. ಸದಸ್ಯರು ಅಧಿವೇಶನದ ದಿನಭತ್ಯೆ ಇಲ್ಲವೇ ಊಟ-ಉಪಹಾರ ಎರಡರಲ್ಲಿ ಒಂದನ್ನು ಮಾತ್ರ ಪಡೆಯಲು ಶಾಸಕರುಗಳು ಅರ್ಹರಾಗಿರುವರು ಇದರಿಂದಾಗಿ ದಿನಭತ್ಯೆಗಳನ್ನು ಪಡೆಯುತ್ತಿರುವ ಶಾಸಕರುಗಳಿಗೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಪುನಃ ಊಟ-ಉಪಹಾರಗಳನ್ನು ಉಚಿತವಾಗಿ ನೀಡುವುದು ಕಾನೂನು ಬಾಹಿರವಾಗಿರುವುದು ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಯಾವ ಶಾಸಕರು ಸದನದ ಕಾರ್ಯ ಕಲಾಪಗಳಲ್ಲಿ ಕಡ್ಡಾಯವಾಗಿ ದಿನಪೂರ್ತಿಯಾಗಿ ಭಾಗವಹಿಸುವದಿಲ್ಲವೋ ಅಂತಹ ಶಾಸಕರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ವೇತನ ಭತ್ಯೆಗಳನ್ನು ಇನ್ನಿತರ ಸೌಲಭ್ಯಗಳನ್ನು ನೀಡದೇ ಇರುವ ಕುರಿತಂತೆ ಹಾಗೂ ಇಂತಹ ಶಾಸಕರು ದಂಡದ ರೂಪದಲ್ಲಿ ದಿನವೊಂದಕ್ಕೆ ಇಂತಿಷ್ಟು ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂಬ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ನಿಯಮಾವಳಿಗಳನ್ನು ರೂಪಿಸುವುದನ್ನು ಬಿಟ್ಟು ಅಧಿವೇಶನದ ಸಮಯದಲ್ಲಿ ಶಾಸಕರುಗಳ ಹಾಜರಾತಿಯನ್ನು ಹೆಚ್ಚಿಸುವ ಸಲುವಾಗಿ ಶಾಸಕರಿಗೆ ಸರ್ಕಾರದಿಂದಲೇ ಉಚಿತವಾಗಿ ಊಟ-ಉಪಹಾರಗಳನ್ನು ನೀಡುವುದನ್ನು ಮುಂದುವರಿಸಿದರೆ “ಸದನಗಳೆಂದರೆ ಮಧ್ಯಾಹ್ನದ ಬಿಸಿಯೂಟದ ಶಾಲೆಗಳಾಗಿ ಪರಿವರ್ತನೆಗೊಂಡು ಸದನದ ಘನತೆ ಗೌರವಗಳಿಗೆ ಚ್ಯುತಿ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬ ಅಂಶಗಳನ್ನು ಸಹ ಸದರಿ ಪತ್ರದಲ್ಲಿ ವಿವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿಯ ಅಧಿವೇಶನ ನಡೆಯುವ ಸಮಯದಲ್ಲಿ ದಿನಭತ್ಯೆಗಳನ್ನು ಪಡೆದುಕೊಳ್ಳುತ್ತಿರುವ ಶಾಸಕರಿಗೆ ಉಚಿತವಾಗಿ ಊಟ-ಉಪಹಾರಗಳನ್ನು ನೀಡಲು ನಿಯಮಾವಳಿಗಳಲ್ಲಿ ಅವಕಾಶವಿದ್ದರೆ ಅದರ ಪ್ರತಿ ನೀಡುವಂತೆ ಮಾಹಿತಿ ಹಕ್ಕಿನಿಂದ ಸಲ್ಲಿಸಲಾಗಿದ್ದ ಅರ್ಜಿಗೆ ಜಿಲ್ಲಾಧಿಕಾರಿಗಳು ಹಾಗೂ ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಸೇರಿದಂತೆ ಯಾವ ಅಧಿಕಾರಿಗಳು ನಿಖರವಾಗಿ ಉತ್ತರ ನೀಡಲು ಸಿದ್ಧರಿದ್ದಂತೆ ಕಾಣುವುದಿಲ್ಲ. ಹೀಗಾಗಿ ಈ ಅರ್ಜಿಯನ್ನು ಒಬ್ಬರಿಂದ ಒಬ್ಬರಿಗೆ ವರ್ಗಾಯಿಸುತ್ತಿರುವ ವಿಷಯವನ್ನು ಸಹ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ತಮ್ಮ ತಮ್ಮ ಕ್ಷೇತ್ರಗಳ ಹಾಗೂ ರಾಜ್ಯದ ಜನರ ಸಮಸ್ಯೆಗಳನ್ನು ಸಮರ್ಪಕವಾಗಿ ವಿಧಾನಸಭಾ ಅಧಿವೇಶನಗಳಲ್ಲಿ ಮಂಡಿಸಿ ಆಳವಾಗಿ ಚರ್ಚಿಸಿ ಅವುಗಳಿಗೆ ಸೂಕ್ತ ಪರಿಹಾರವನ್ನು ಹೊರಡಿಸುವ ದಿಶೆಯಲ್ಲಿ ಸದನವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ಮತ್ತು ಇವುಗಳಿಗೆ ಸಂಬಂಧಿಸಿದ ಶಾಸನಗಳನ್ನು ರಚನೆ ಮಾಡುವ ಜವಾಬ್ದಾರಿ ಶಾಸಕರ ಮೇಲೆ ಇರುತ್ತದೆ. ಆದರೆ ಇದೆಲ್ಲವನ್ನು ಮರೆತು ಗದ್ದಲ, ಕೋಲಾಹಲ, ಬಾವಿಗಿಳಿದು ಧರಣಿ ಮುಂತಾದವುಗಳಿಗಾಗಿಯೇ ಕಲಾಪದ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿರುವ ವಿಷಯವನ್ನು ಈ ಪತ್ರದಲ್ಲಿ ಕಾಣಿಸಲಾಗಿದೆ.
ಕಾರಣ ಒಂದು ವೇಳೆ ಈ ಸಲದ ಅಧಿವೇಶನದ ವೇಳೆ ಶಾಸಕರಿಗೆ ಸರ್ಕಾರದಿಂದ ಉಚಿತವಾಗಿ ಊಟ-ಉಪಹಾರಗಳನ್ನು ನೀಡಿದ್ದೇ ಆದಲ್ಲಿ ಇದಕ್ಕಾಗಿ ತಗುಲಿರುವ ಸಂಪೂರ್ಣ ವೆಚ್ಚವನ್ನು ಸಭಾಪತಿ, ಸಭಾಧ್ಯಕ್ಷರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸ್ವಂತ ಜೇಬಿನಿಂದ ಸರ್ಕಾರಕ್ಕೆ ಮರುಪಾವತಿಸಿಕೊಳ್ಳಲು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


